ವಿಜಯಸಾಕ್ಷಿ ಸುದ್ದಿ, ಗದಗ : ಸಾರ್ವಜನಿಕ ಜೀವನದಲ್ಲಿ ಶಾಂತಣ್ಣ ಮುಳವಾಡ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಶಾಂತಣ್ಣನವರ ಬಗ್ಗೆ ನಮಗೆ ಬಹಳ ಪ್ರೀತಿ, ವಿಶ್ವಾಸ ಇದೆ. ಸಮಾಜ ಖುರ್ಚಿ, ಅಧಿಕಾರ ನೋಡುವುದಿಲ್ಲ. ಬದಲಾಗಿ ಕಷ್ಟದಲ್ಲಿ ಕೈ ಹಿಡಿಯುವ ಹೃದಯವನ್ನು ನೋಡುತ್ತದೆ. ಬುಳ್ಳಾ ಪ್ಲಾಟಿನಲ್ಲಿ ಯಾವುದೇ ಸಮಸ್ಯೆ ಆದರೂ ಶಾಂತಣ್ಣ ಸ್ಪಂದಿಸುತ್ತಾರೆ. ನಮ್ಮ ಕುಟುಂಬದ ಮೇಲೆ ಅಲ್ಲಿನ ಜನ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದಾರೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ್ ಹೇಳಿದರು.
ನಗರದ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ ಗೆಳೆಯರ ಬಳಗ, ಯೂನಿಕ್ ಅಸೋಸಿಯೇಟ್ಸ್, ರಿಯಲ್ ಎಸ್ಟೇಟ್, ಡೆವಲಪರ್ಸ್ ಗದಗ, ಕೆಎಸ್‌ಆರ್‌ಟಿಸಿ ಸ್ಟಾಪ್ ವರ್ಕರ್ಸ್ ಫೆಡರೇಷನ್ ಗದಗ ವಿಭಾಗ, ಪಿಎನ್‌ಎಮ್ ಮಿನರಲ್ಸ್, ಶ್ರೀಕಾಶಿ ವಿಶ್ವನಾಥ್, ಶ್ರೀ ದುರ್ಗಾದೇವಿ ವಿವಿಧೋದ್ದೇಶಗಳ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಪ್ ವರ್ಕರ್ಸ್ ಫೆಡರೇಷನ್ ಗದಗ ವಿಭಾಗದ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಶಾಂತಣ್ಣ ಅ.ಮುಳವಾಡರವರ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲರೂ ನಮ್ಮವರು ಎನ್ನುವ ಭಾವವನ್ನು ಶಾಂತಣ್ಣ ಮುಳವಾಡ ಹೊಂದಿದ್ದಾರೆ. ಅವರ ಸೇವಾ ಅವಧಿಯಲ್ಲಿನ ಅಧಿಕಾರಿಗಳಿಗೂ ಅವರು ಅಚ್ಚುಮೆಚ್ಚಾಗಿದ್ದರು. ಶಾಂತಣ್ಣನವರು ನಮ್ಮಂತಹ ರಾಜಕಾರಣಿಗಳಿಗೆ ಪ್ರೇರಣೆ ಆಗಿದ್ದಾರೆ. ಅವರ ಹಾಗೂ ನನ್ನ ನಡುವೆ ಅವಿನಾಭಾವ ಸಂಬಂಧವಿದ್ದು, ಜೀವನದ ಕೊನೆಯವರೆಗೂ ಮುಂದುವರಿಯಲಿ ಎಂದು ಪುಟ್ಟರಾಜ ಗವಾಯಿಗಳಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಶಾಂತಣ್ಣ ಮುಳವಾಡ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಅನೇಕ ಅಡೆ-ತಡೆಗಳನ್ನು ಎದುರಿಸಿದ್ದೇನೆ. 8-9ಬಾರಿ ಅಧಿಕಾರಿಗಳು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿದ್ದರು. ಆದರೆ, ಡಿ.ಆರ್. ಪಾಟೀಲ್ ಹಾಗೂ ಹೆಚ್.ಕೆ. ಪಾಟೀಲರು ಒಂದೇ ದಿನದಲ್ಲಿ ಮತ್ತೆ ಗದಗದಲ್ಲೇ ಸೇವೆ ಸಲ್ಲಿಸುವಂತೆ ಮಾಡಿದ್ದಾರೆ. ಇದರ ಪರಿಣಾಮ ಸತತ 28 ವರ್ಷಗಳ ಕಾಲ ಗದಗದಲ್ಲೇ ಸೇವೆ ಸಲ್ಲಿಸಲು ಅವಕಾಶ ಸಿಕ್ಕಂತಾಯಿತು. ಕಾರ್ಮಿಕರ ಸಮಸ್ಯೆಯ ವಿರುದ್ಧವಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ನೂರಾರು ಕಾರ್ಮಿಕರು ಸಹಕಾರ ನೀಡಿದರು. ಇದರಿಂದ ನಾನು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.
ಈ ಸಂದರ್ಭದಲ್ಲಿ ನಿರಂಜನ್ ಮೂರ್ತಿ, ಸಿ.ವಿ. ಚಂದ್ರಶೇಖರ್, ಡಿ.ಎಮ್. ದೇವರಾಜ್, ಆರ್.ಎಫ್. ಕವಳಿಕಾಯಿ, ಜಿ.ವಿ. ಬಳಗಾನೂರ, ಗುರುರಾಜ್ ಬಳಗಾನೂರ, ಪ್ರಭು ಬುರಬುರೆ, ಬಸವರಾಜ ಅಸೂಟಿ, ಮೋಹನ್ ಮಾಳಶೆಟ್ಟಿ, ಟಿ.ಎನ್. ಆಸಂಗಿ, ಅಸ್ಲಾಂ ನರೆಗಲ್, ವಿದ್ಯಾಧರ್ ದೊಡ್ಡಮನಿ, ಶರಣಪ್ಪ ಗುಡಿಮನಿ, ಶೇಖಣ್ಣ ಮುಳವಾಡ, ಚನ್ನವೀರಪ್ಪ ಮಳಗಿ, ಎಮ್.ಐ. ನವಲಗುಂದ, ಎಮ್.ವಿ. ಭಗವತಿ, ಗೋಪಾಲ್ ರಾಯ್, ಪರಶುರಾಮ್ ನಾಯ್ಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇಷ್ಟು ಕಾಲ ಕ್ರಿಯಾಶೀಲತೆಯಿಂದ ಎಲ್ಲರ ಜೊತೆ ಸಹಕಾರ ಭಾವದಿಂದ ಸೇವೆ ಸಲ್ಲಿಸಿ ಶಾಂತಣ್ಣ ಮುಳವಾಡ ನಿವೃತ್ತಿ ಹೊಂದಿದ್ದಾರೆ. ಆದರೆ, ಅವರು ನಿವೃತ್ತಿ ಹೊಂದಿದ್ದು ಕೇವಲ ಒಂದು ಸ್ಥಾನದಿಂದ. ಸಮಾಜದಲ್ಲಿ ಅವರಿಗೆ 10-20 ಪ್ರವೃತ್ತಿಗಳು ಕೈಬೀಸಿ ಕರೆಯುತ್ತಿವೆ. ಚಾಲಕರಾಗಿ ಸೇವೆ ಆರಂಭಿಸಿದ ಅವರು ಇಂದು ಸಾಮಾಜಿಕ ಜೀವನದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ.
– ಷ.ಬ್ರ. ಶಿವಕುಮಾರ ಸ್ವಾಮೀಜಿ.
ದಾಸೊಹ ಮಠ, ಅಣ್ಣಿಗೇರಿ.



