ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬುಧವಾರ ಶಿರಹಟ್ಟಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತಿಯ ಅಂಗವಾಗಿ ಪಟ್ಟಣದ ಮ್ಯಾಗೇರಿ ಓಣಿಯಿಂದ ಬೃಹತ್ ಭಾವಚಿತ್ರ ಮೆರವಣಿಗೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಜಯಂತಿ ಆಚರಿಸಲಾಯಿತು.
ಅಂಬಿಗರ ಚೌಡಯ್ಯ ಸಮಾಜದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ ಮಾತನಾಡಿ, ಚೌಡಯ್ಯನವರು ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯಲ್ಲಿ ದೋಣಿ ನಡೆಸುವ ಕಾಯಕ ಕೈಗೊಂಡು ಕಾಯಕ, ದಾಸೋಹ, ಶಿವಯೋಗ ಸಾಧನೆಯ ಮೂಲಕ ಅನೇಕ ವಚನಗಳನ್ನು ಬರೆದಿದ್ದಾರೆ. ಬೆನ್ನಿಗೆ ವಚನ ಸಾಹಿತ್ಯ ಕಟ್ಟುಗಳನ್ನು ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಡಿದ ವೀರ ಗಣಾಚಾರಿ ಶರಣರಾಗಿದ್ದಾರೆ. ತುಂಬಿದ ನದಿಯಲ್ಲಿ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರನಲ್ಲದೇ, ಭವಸಾಗರವೆಂಬ ಈ ಸಂಸಾರದ ವಾರಿಧಿಯನ್ನು ಅರಿವೆಂಬ ಹುಟ್ಟು ಹಾಕಿ ದಾಟಿಸುವ ಕೌಶಲ್ಯವುಳ್ಳವರಾಗಿದ್ದರು. ಅಪಾರ ಅನುಭವದ ಅಮೃತವನ್ನು ಚಾಟಿ ಏಟಿನೊಂದಿಗೆ ಕೊಟ್ಟು ಹೊಡೆದೆಬ್ಬಿಸಿ ಚುಚ್ಚು ಮಾತಿನ ಬಿಚ್ಚು ಹೃದಯದ ಕೆಚ್ಚಿನ ಅಮರ ವಚನಗಳು, ನುಡಿದಂತೆ ನಡೆದ, ನಡೆದಂತೆ ನುಡಿದ ಧೀರ-ವೀರ ಶರಣರಾಗಿದ್ದರು ಇವರ ಆದರ್ಶ ಇಂದಿನ ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದರು.
ತಾಲೂಕಾ ಆಡಳಿತದ ವತಿಯಿಂದ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಪಾಲ್ಗೊಂಡು ಮಾತನಾಡಿದರು.
ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಸಬ್ ರಜಿಸ್ಟ್ರಾರ್ ಶರಣಪ್ಪ ಪವಾರ, ಎಚ್.ಎಂ. ದೇವಗಿರಿ, ಹೊನ್ನಪ್ಪ ಶಿರಹಟ್ಟಿ, ರವಿ ಗುಡಿಮನಿ, ಪ್ರವೀಣ ಹುಬ್ಬಳ್ಳಿ, ಆನಂದ ಕೋಳಿ, ಬಾಬಾಜಾನ ಕೋಳಿವಾಡ, ಶಫಿ ಹೆಸರೂರ, ಪ್ರಕಾಶ ಸುಣಗಾರ, ಮಂಜು ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಕೃಷ್ಣಪ್ಪ ಹುಬ್ಬಳ್ಳಿ, ಕಾರ್ತಿಕ ಸುಣಗಾರ, ಉಮ್ಮಣ್ಣ ಸುಣಗಾರ, ನಿಂಗಪ್ಪ ಹುಬ್ಬಳ್ಳಿ, ಸಂಜು ಹುಬ್ಬಳ್ಳಿ, ಪ್ರದೀಪ ಹುಬ್ಬಳ್ಳಿ, ಚಂದ್ರಶೇಖರ ಹುಬ್ಬಳ್ಳಿ, ಶಂಕರಪ್ಪ ಬಾರ್ಕಿ, ನಿಂಗಪ್ಪ ವಡವಿ, ಶರಣಪ್ಪ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ರಾಘವೇಂದ್ರ ರಾವ್, 12ನೇ ಶತಮಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಆ ಕಾಲದ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವನಿಷ್ಠೆ, ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರರಾಗಿ ಅನೇಕ ಬಿರುದುಗಳನ್ನು ಪಡೆದು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು ಎಂದರು.



