ಸಮಾನತೆಯ ಬೆಳಕಿನಲ್ಲಿ ಸದೃಢ, ಸುಂದರ, ವ್ಯಕ್ತಿ, ವ್ಯಕ್ತಿತ್ವ, ಸಮಾಜ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಬಸವಾದಿ ಶಿವಶರಣರ ಎಲ್ಲ ವಿಚಾರಧಾರೆಗಳು ಮನುಕುಲದ ಉನ್ನತಿಗೆ ಬೆಳಕಾಗಿವೆ. ಸುಜ್ಞಾನದ ಕಡೆಗೆ ನಮ್ಮನ್ನು ಕೊಂಡೊಯ್ಯುವ ಶರಣರ ವಿಚಾರಗಳೆಲ್ಲವೂ ಸರ್ವಕಾಲಕ್ಕೂ ಅತ್ಯವಶ್ಯಕವಾಗಿ ಬೇಕಾಗಿರುವ ಮೌಲ್ಯಗಳಾಗಿವೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಾಡಿನಾದ್ಯಂತ ಶರಣರ ವಿಚಾರಧಾರೆಗಳನ್ನು ಬಿತ್ತರಿಸುವ ಕಾರ್ಯ ಮಾಡುತ್ತಿದೆ. ಶರಣ ಸಾಹಿತ್ಯ ಪರಿಷತ್ತಿನ ಅಶೋತ್ತರಗಳಂತೆ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ಗದಗ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಿದ್ದು ಹಲವಾರು ವೈಶಿಷ್ಟ್ಯತೆಗಳ ಸಮಾಗಮವಾಗಿದೆ.
ಪರಿಷತ್ತಿನ ಗೌರವಾಧ್ಯಕ್ಷರಾಗಿರುವ ಪರಮಪೂಜ್ಯ ಸುತ್ತೂರಿನ ಶ್ರೀಗಳು ಹಾಗೂ ಗದುಗಿನ ತೋಂಟದಾರ್ಯ ಮಠದ ಪರಮಪೂಜ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ. ಸಿ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕದಳಿ ಮಹಿಳಾ ವೇದಿಕೆಯ ರಾಜ್ಯ ಸಂಚಾಲಕರಾದ ಸುಶೀಲಾ ಸೋಮಶೇಖರ್ ಅವರ ಸಹಕಾರದೊಂದಿಗೆ ಗದಗ ಜಿಲ್ಲೆಯಲ್ಲಿ ಇಂತಹ ವಿನೂತನವಾದ ಕಾರ್ಯಕ್ರಮ ನೆರವೇರುತ್ತಿದೆ.
ಮೌನ ತಪಸ್ವಿಗಳ ಸುಕ್ಷೇತ್ರ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠ ಬಳಗಾನೂರಿನಲ್ಲಿ ಪೂಜ್ಯ ಶ್ರೀ ಶಿವಶಾಂತವೀರ ಶರಣರ ಆಶೀರ್ವಾದ ಮಾರ್ಗದರ್ಶನ, ಸಲಹೆ-ಸೂಚನೆಗಳಂತೆ ಈ ಕಾರ್ಯಕ್ರಮ ಅವರ ಸೃಜನಾತ್ಮಕ ಚಿಂತನೆಯ ಪ್ರತಿಫಲವಾಗಿ ಆಯೋಜನೆಯಾಗಿದೆ. ಶ್ರೀ ದೊರೆಸ್ವಾಮಿ ಮಠ ಬೈರನಹಟ್ಟಿಯ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಬೂದೀಶ್ವರ ಸಂಸ್ಥಾನಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಮಕ್ಕಳಿಗಾಗಿ ನಡೆಯುವ ಈ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಪ್ರಣತಿ ರಾಜೇಂದ್ರ ಗಡಾದ ಅವರು ಅಪರೂಪದ ಪ್ರತಿಭಾವಂತರು. ಸಾಹಿತಿಗಳಾದ ಡಾ. ರಾಜೇಂದ್ರ ಗಡಾದವರ ಸುಪುತ್ರಿ ಪ್ರಣತಿ ಗಡಾದ ಅವರ ತಂದೆ-ತಾಯಿಗಳಂತೆ ಸಾಹಿತ್ಯ ಆಸಕ್ತಿಯನ್ನು ಹೊಂದಿದವರು. ಕಥೆ, ಕವನ, ಚುಟುಕು ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬರವಣಿಗೆಯ ಹವ್ಯಾಸವನ್ನು ಹೊಂದಿರುವ ಕ್ರಿಯಾಶೀಲ ಬರಹಗಾರ್ತಿ.
ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಬಾಲ ಪ್ರತಿಭೆಗಳನ್ನು ಗುರುತಿಸಿ ಈ ಸಮ್ಮೇಳನದಲ್ಲಿ `ಬಾಲ ಶರಣ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಜಿಲ್ಲೆಯ 7 ತಾಲೂಕುಗಳು ಹಾಗೂ ಒಂದು ಗ್ರಾಮೀಣ ಘಟಕವನ್ನು ಒಳಗೊಂಡು ಎಂಟು ಮಕ್ಕಳನ್ನು ಆಯ್ಕೆ ಮಾಡಿ ಅವರ ವಿಶೇಷ ಸಾಮರ್ಥ್ಯಕ್ಕೆ ಎಲ್ಲ ಶರಣ ಬಂಧುಗಳ, ಪರಮಪೂಜ್ಯರ ಸಮ್ಮುಖದಲ್ಲಿ ಸತ್ಕರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ.
ಗದಗ ಶಹರ ಘಟಕದಿಂದ ಡಾ. ವೈದೃತಿ ನಾ. ಕೊರಿಶೆಟ್ಟರ್ ಆಯ್ಕೆಯಾಗಿದ್ದು, ಅಸಾಧಾರಣ ನೆನಪಿನ ಶಕ್ತಿಯನ್ನು ಹೊಂದಿದ ಈ ಪುಟಾಣಿ ತನ್ನ 7ನೇ ವರ್ಷದಲ್ಲಿ 5 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿದ್ದು, ಚೆನ್ನೆನ ದಿ ಯುನಿವರ್ಸಲ್ ವಿಶ್ವವಿದ್ಯಾಲಯದವರು ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.
ಶಿರಹಟ್ಟಿ ತಾಲ್ಲೂಕಿನಿಂದ ಆಯ್ಕೆಯಾದ ಪುನೀತ್ ರೆಡ್ಡಿ ಎನ್.ಎ 9ನೇ ತರಗತಿಯಲ್ಲಿ ಓದುತ್ತಿರುವ, ಬಹುಮುಖ ಪ್ರತಿಭೆಯನ್ನು ಹೊಂದಿದ್ದಾನೆ. ದೊಡ್ಡಬಳ್ಳಾಪುರದಲ್ಲಿ 2025ರ ಅಕ್ಟೋಬರ್ 1ರಿಂದ 9ರವರೆಗೆ ನಡೆದ ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಭಾರತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು, ಸ್ವತಃ ತಾನೇ ಟೆಲಿಸ್ಕೋಪ್ ತಯಾರಿಸಿ ದಾಖಲೆ ಬರೆದಿದ್ದಾನೆ.
ಗದಗ ಗ್ರಾಮೀಣ ಘಟಕದಿಂದ ಆಯ್ಕೆಯಾದ ಸಿದ್ದಾರ್ಥ್ ಬಡ್ನಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ಥೈಲ್ಯಾಂಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ನರಗುಂದ ತಾಲೂಕಿನಿಂದ ಆಯ್ಕೆಯಾದ ಅಪೂರ್ವ ವಡ್ಡರ್ ವಿಶೇಷ ಪ್ರತಿಭೆಯಾಗಿದ್ದು, ರಾಜ್ಯಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ಮೂರು ಬಾರಿ ಪ್ರಥಮ ಸ್ಥಾನ ಪಡೆದು 500ರವರೆಗೆ ಮಗ್ಗಿಗಳನ್ನು ತಪ್ಪಿಲ್ಲದೆ ಹೇಳುವುದು, ಕೇವಲ ಎಂಟು ನಿಮಿಷದಲ್ಲಿ 193 ಲೆಕ್ಕಗಳನ್ನು ಬಿಡಿಸಿ ಪ್ರಥಮ ಸ್ಥಾನ ಪಡೆದು ಸಾಧನೆಗೈದಿದ್ದಾಳೆ.
ಮುಂಡರಗಿ ತಾಲ್ಲೂಕಿನಿಂದ ಆಯ್ಕೆಯಾದ ರಕ್ಷಿತಾ ಚುರ್ಚಿಹಾಳ್ ಜಪಾನಿನ ಟೋಕಿಯೋದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಾಟ್ ಕುಕಿಂಗ್ ವ್ಯಸಲ್ ಕಿಟ್ ಎಂಬ ಪ್ರಾಜೆಕ್ಟ್ನ್ನು ಮಂಡಿಸಿ ಬಹುಮಾನ ಪಡೆದಿದ್ದಾರೆ.
ಗಜೇಂದ್ರಗಡ ತಾಲ್ಲೂಕಿನಿಂದ ಆಯ್ಕೆಯಾದ ಪೂರ್ವಿ ಜೋಶಿ ಬೆಳಗಾವಿ ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಕ್ತಿಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಜೊತೆಗೆ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಹಾಗೂ ಅಣುಕು ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ.
ರೋಣ ತಾಲ್ಲೂಕಿನಿಂದ ಆಯ್ಕೆಯಾದ ಥಲಕೇಶ್ ಪಾಟೀಲ್ ಅತಿ ಚಿಕ್ಕ ವಯಸ್ಸಿನಿಂದಲೇ ಓದು-ಬರಹ, ಲೆಕ್ಕ ವಿಷಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿ, ಪ್ರಾಚ್ಯ ಪ್ರಜ್ಞೆ ರಸಪ್ರಶ್ನೆ, ವಿಜ್ಞಾನ ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಹಂತದಲ್ಲಿ ಬಹುಮಾನ ಪಡೆದು ರಾಜ್ಯ ಮಟ್ಟದವರೆಗೂ ಭಾಗವಹಿಸಿದ್ದು ವಿಶೇಷವಾಗಿದೆ.
ಲಕ್ಷ್ಮೇಶ್ವರ ತಾಲ್ಲೂಕಿನಿಂದ ಆಯ್ಕೆಯಾದ ಕೃಷ್ಣಪ್ರಿಯಾ ಬದಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕಲಾಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಚಿತ್ರಕಲೆ, ಯೋಗಾಸನ, ಕ್ರಾಫ್ಟ್, ವಚನ ಕಂಠಪಾಠ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಎಂಟು ಮಕ್ಕಳ ವಿಶೇಷ ಸಾಧನೆಯ ಸಮಾಗಮವಾದ ಈ ಸಮ್ಮೇಳನದಲ್ಲಿ `ಜಿಲ್ಲಾ ಬಾಲ ಶರಣ ಸಿರಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ.
ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎ. ಬಳಿಗೇರವರು ಶ್ರಮಿಸಿದ್ದಾರೆ. ಇವರ ಜೊತೆಗೂಡಿ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ತಾಲೂಕಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರು, ಎಲ್ಲ ತಾಲ್ಲೂಕುಗಳ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಸಹಕರಿಸಿದ್ದಾರೆ. ಇಂತಹ ವಿನೂತನವಾದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ಪರಮಪೂಜ್ಯರು, ಎಲ್ಲ ಶರಣ ಬಂಧುಗಳು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಎಲ್ಲ ಶರಣ ಬಂಧುಗಳಿಗೆ ಧನ್ಯವಾದಗಳು.

ಸುಧಾ ಹುಚ್ಚಣ್ಣವರ
ಜಿಲ್ಲಾಧ್ಯಕ್ಷರು, ಕದಳಿ ಮಹಿಳಾ ವೇದಿಕೆ



