ಕವಿತಾ ಮಿಶ್ರಾ ಹೈದಾರಾಬಾದ ಕರ್ನಾಟಕ ಪ್ರದೇಶದ ರಾಯಚೂರ ಜಿಲ್ಲೆಯ ಶಿರವಾರ ತಾಲೂಕು ಕವಿತಾಳ ಗ್ರಾಮದವರು. ವಿದ್ಯಾಕಾಶಿ ಧಾರವಾಡದ ಪ್ರಸೆಂಟೇಶನ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕಿಟಲ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ನಾಡಿನ ಪ್ರತಿಷ್ಠಿತ ಹುಬ್ಬಳ್ಳಿಯ ಬಿ.ವ್ಹಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿ.ಇ. ಸಿವಿಲ್ ಪದವಿ ಹಾಗೂ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಓದಿದ್ದು ಇಂಜಿನಿಯರಿಯಿಂಗ್ ಹಾಗೂ ಮನಃಶಾಸ್ತ್ರ ವಿಷಯವಾದರೂ ಸಹ ಇವರು ಕೃಷಿ, ತೋಟಗಾರಿಕೆ, ಅರಣ್ಯ ವಿಜ್ಞಾನದಲ್ಲಿ ಆಸಕ್ತಿ ತೋರಿಸಿದರು. ಜೇನು ಕೃಷಿ, ಕುರಿ ಸಾಕಾಣಿಕೆ, ಕುಕ್ಕುಟೋದ್ಯಮ, ಪಶುಪಾಲನೆ, ಹೈನುಗಾರಿಕೆ, ಸಸ್ಯಗಳ ಪಾಲನೆ (ನರ್ಸರಿ) ಮನಃಪೂರ್ವಕವಾಗಿ ಮಾಡಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸುವುದರ ಜೊತೆಗೆ ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬುದನ್ನು ಸಾಕಾರಗೊಳಿಸಿದ ಶ್ರೇಯಸ್ಸು ಇವರದಾಗಿದೆ.
ಮನಸ್ಸಿದ್ದಲ್ಲಿ ಮಾರ್ಗವೆಂಬಂತೆ ನಮ್ಮ ದೇಶದ ಮೂಲ ಕಸಬನ್ನು ನಿರ್ವಹಿಸಿ ಅದರಲ್ಲಿ ಯಶಸ್ಸನ್ನು ಕಾಣುವುದರ ಮೂಲಕ ಯುವಸಮುದಾಯಕ್ಕೆ, ರೈತ ವರ್ಗಕ್ಕೆ ಮಾದರಿಯಾಗಿರುವರು. ಬೀದರ ಪಶುವೈದ್ಯಕೀಯ, ಮೀನುಗಾರಿಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಚೂರು ಕೃಷಿ ವಿ.ವಿಯಿಂದ ಅತ್ಯುತ್ತಮ ಕೃಷಿಕ ಪ್ರಶಸ್ತಿ, ಹೈದಾರಾಬಾದ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಿನಿಂದ ಸುವರ್ಣ ಪ್ರಶಸ್ತಿ, ಬಾಗಲಕೋಟೆ ತೋಟಗಾರಿಕಾ ವಿ.ವಿಯಿಂದ ಅತ್ಯುತ್ತಮ ತೋಟಗಾರಿಕಾ ರೈತ ಮಹಿಳೆ ಪ್ರಶಸ್ತಿ, ಕೇಂದ್ರ ಸರ್ಕಾರದ ಕೃಷಿ ವಿಜ್ಞಾನ ಸಚಿವಾಲಯದಿಂದ ಕೃಷಿಕ ಪ್ರಶಸ್ತಿ ಜೊತೆಗೆ ಕೃಷಿ ಆಹಾರ ತಂತ್ರಜ್ಞಾನ ಸಚಿವಾಲಯದಿಂದ ಆರ್.ಎಸ್.ಎಸ್ ದೆಹಲಿಯವರಿಂದ ಪ್ರೇರಣಾದೀಪ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಅವರಗೀಗ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಮಠ ಸುಕ್ಷೇತ್ರ ಬಳಗಾನೂರ ಹಾಗೂ ಸಿದ್ಧಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಉಮಾ ವಿದ್ಯಾಶ್ರೀ ಟ್ರಸ್ಟ್ ನವಲಗುಂದ ಅವರ ಸಹಯೋಗದಲ್ಲಿ ಶರಣಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಚಲನಚಿತ್ರ ಹಿನ್ನೆಲೆ ಗಾಯಕ ಕಡಬಗೇರಿ ಮುನಿರಾಜು ಬೆಂಗಳೂರು ಎಂ.ಕೆಪಯ್ಯ ಪುತ್ರ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಾಡಿನ ಶ್ರೇಷ್ಠ ಜನಪದ ಕಲಾವಿದರಾಗಿ, ಹಿನ್ನೆಲೆ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅನೇಕ ಚಲನಚಿತ್ರ ಗೀತೆಗಳಿಗೆ ಹಿನ್ನೆಲೆ ನೀಡಿ, ಅವುಗಳಿಗೆ ಜೀವತುಂಬಿ ಚಲನಚಿತ್ರ ಯಶಸ್ವಿಯಾಗಲು ಹೆಚ್ಚು ಶ್ರಮಿಸುತ್ತಿರುವರು. ಸುಮಾರು 60 ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ ಹೆಗ್ಗಳಿಕೆ ಇವರದಾಗಿದೆ. ದಕ್ಷಿಣ ಭಾರತ ಮಿರ್ಚಿ ಸಂಗೀತ ಪ್ರಶಸ್ತಿ, ಚಂದನವನ ಸಿನಿಮಾ ಪ್ರಶಸ್ತಿ, ಆದಿಜ್ಯೋತಿ ಬ್ಯಾನೋ ರಾಷ್ಟ್ರೀಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ನಟಸಾರ್ವಭೌಮ ಡಾ. ರಾಜಕುಮಾರ ಚಾಲುಕ್ಯ ಪ್ರಶಸ್ತಿಯು ಜಾನಪದ ಕ್ಷೇತ್ರದ ಬೆಳವಣಿಗೆ ಹಾಗೂ ಯುವ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ನೀಡಿರುವುದರ ಪ್ರಯಕ್ತ ಲಭಿಸಿವೆ.
ಅತ್ಯುತ್ತಮ ಹಾಡುಗಾರ ಎಂದು 2023-24ರಲ್ಲಿ ನಾಮನಿರ್ದೇಶಿತರಾಗಿದ್ದಾರೆ. 4 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಾಡಿನ ಒಳ-ಹೊರಗೆ ನೀಡಿ ಜನರಲ್ಲಿ ಜನಪದ ಜಾಗೃತಿ ಮೂಡಿಸುವುದರ ಮೂಲಕ ಜನಪದ, ಕಲೆಯ ಉಳಿವು ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಡಿಡಿ ಚಂದನ ದೂರದರ್ಶನದಿಂದ ಗಾನಗಾರುಡಿಗ ಪ್ರಶಸ್ತಿಗೆ ಪಾತ್ರರಾದ ಅವರಗೀಗ ಶರಣಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅನ್ನಪೂರ್ಣ ಬಸಯ್ಯ ಬಳೂಲಮಠ ಬಸವನಾಡು ಬಾಗಲಕೋಟೆ ನಗರದ ಸರಳ ಸಾತ್ವಿಕ ಶರಣಜೀವಿ, ವೇ.ಮೂ. ಬಸಯ್ಯ-ಪ್ರಭಾವತಿ ಅವರ ಪುಣ್ಯಗರ್ಭದಲ್ಲಿ 23-02-1998ರಂದು ಜನಿಸಿದರು. ಇವರ ಕುಟುಂಬ ಪೂಜ್ಯ ಶರಣರ ಪ್ರಭಾವ ವಲಯದಲ್ಲಿ ಬೆಳೆದು ಬಂದಿರುವುದು ಹೆಮ್ಮೆ. ಇವರು ಪ್ರಾಥಮಿಕ ಶಿಕ್ಷಣದಿಂದ ಬಿ.ಇ. ಪದವಿಯವರೆಗೆ ಬಾಗಲಕೋಟೆಯಲ್ಲಿ ಶಿಕ್ಷಣ ಪೂರೈಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಬಾಲ್ಯದಿಂದಲೂ ಸತತ ಅಭ್ಯಾಸ, ಅಧ್ಯಯನ, ಓದು, ಬರಹಗಳೊಂದಿಗೆ ಮುಂಚೂಣಿಯಲ್ಲಿದ್ದು, ಪ್ರತಿಭಾಶಾಲಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಬಿ.ಇ. ಸಿವಿಲ್ ವಿಭಾಗದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ನಾಡಿನ ಪ್ರತಿಷ್ಠಿತ ಸುರತಕಲ್ ಇಂಜಿನಿಯರಿಯಿಂಗ್ ಕಾಲೇಜಿನಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡಿ ತೇರ್ಗಡೆ ಹೊಂದಿದರು.
ರಾಷ್ಟ್ರದ ಪ್ರತಿಷ್ಠಿತ ಧಾರವಾಡ ಐ.ಐ.ಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಆಯ್ಕೆಯಾಗಿ ಹೈಡ್ರೋ ಮೆಕ್ಯಾನಿಕಲ್ ಬಿಹೇವಿಯರ್ ಆಫ್ ಅನ್‌ಸಾಚ್ಯೂರೇಟಡ್ ರೈಲ್ವೇ ಎಂಬಾಕಮೆಂಟ್ ವಿಷಯವನ್ನು ಆಧರಿಸಿ ಪ್ರಸ್ತುತ ರೈಲುಮಾರ್ಗದಲ್ಲಿಯ ಮಣ್ಣಿನ ಗುಣಲಕ್ಷಣಗಳು ಕುರಿತು ವಿಶೇಷ ಸಂಶೋಧನೆ ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅನೇಕ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ಇವರು ತಮ್ಮ ಅಭ್ಯಾಸಪೂರ್ಣ ವಿದ್ವತ್‌ಪೂರ್ಣ ಪ್ರಬಂಧಗಳನ್ನು ಮಂಡಿಸಿ, ಪ್ರಸ್ತುತ ವಿಷಯಗಳ ಕುರಿತು ವಿಶೇಷ ಬೆಳಕು ಚೆಲ್ಲಿರುವರು. ಬಿ.ಟೆಕ್ ಪದವಿಯಲ್ಲಿ 6ನೇ ರ‍್ಯಾಂಕ್ ಗಳಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸುರಂಗಮಾರ್ಗದ ಕುರಿತು ಮಣ್ಣಿನಲ್ಲಿಯ ಖನಿಜಾಂಶಗಳು, ಅವುಗಳ ವಿಧಗಳ ಕುರಿತು ಬಹುಕರಾರುವಕ್ಕಾಗಿ ಅಧ್ಯಯನ ಮಾಡುವುದರ ಮೂಲಕ ವಿಷಯಪ್ರಭುತ್ವ ಹೊಂದಿದ್ದಾರೆ. ಸಿವಿಲ್ ಇಂಜಿನಿಯರಿಯಿಂಗ್ ಕ್ಷೇತ್ರದಲ್ಲಿ ಹೊಸಭರವಸೆ, ನಿರೀಕ್ಷೆಗಳನ್ನು ಹೊಂದಿರುವ ಇವರು ನವ-ನವೀನ ಸಂಶೋಧನೆಗಳ ಮೂಲಕ ಆ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಇವರ ಗ್ರಂಥಗಳ ಪ್ರಕಟಣೆ ಅಧ್ಯಯನಾಸಕ್ತರಿಗೆ ಆಕರಗ್ರಂಥಗಳಾಗಿರುವುದು ಇವರ ಬಹುಮುಖ ಪ್ರತಿಭಾಸಂಪನ್ನತಿಗೆ ಸಾಕ್ಷಿಯಾಗಿದೆ. ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾದ ಅವರಗೀಗ ಚಿಕೇನಕೊಪ್ಪದ ಶ್ರೀಚನ್ನವೀರ ಶರಣರ ಮಠ ಸುಕ್ಷೇತ್ರ ಬಳಗಾನೂರ ಹಾಗೂ ಸಿದ್ಧಲಿಂಗನಗೌಡ ಎಸ್.ಜಂಗ್ಲೆಪ್ಪಗೌಡ್ರ ಉಮಾ ವಿದ್ಯಾಶ್ರೀ ಟ್ರಸ್ಟ್ ಕೊಡಮಾಡುವ ಶರಣಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
-
ಬಿ.ವಾಯ್. ಡೊಳ್ಳಿನ.
ಮುಂಡರಗಿ.



