ವಿಜಯಸಾಕ್ಷಿ ಸುದ್ದಿ, ಗದಗ : ಪಂಚಾಚಾರ್ಯರು, ಶಿವಶರಣರು ವೀರಶೈವ ಧರ್ಮದ ಮೂಲಕ ಮಾನವ ಮಹಾದೇವನಾಗಬಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ವೀರಶೈವ ಧರ್ಮಕ್ಕೆ ಅದರದೇ ಆದ ಇತಿಹಾಸವಿದ್ದರೂ ಅಧ್ಯಯನ ಇಲ್ಲ. ಅನುಭವ ಇದೆಯಾದರೂ ಅನುಷ್ಠಾನ ಇಲ್ಲ. ದೊಡ್ಡ ಸಮಾಜವಿದೆ, ಆದರೆ ಸಂಘಟನೆ ಇಲ್ಲ. ವೀರಶೈವ ಧರ್ಮದ ಒಳಪಂಗಡಗಳಿಗೆ ಸೂಕ್ತ ಸೌಲಭ್ಯಗಳು ಸಿಗಬೇಕಿದೆ. ಆದರೆ ಅದಕ್ಕಾಗಿ ಸಮಾಜವನ್ನು ವಿಭಜಿಸುವುದು ಬೇಡ. ಸಮಾಜದ ಮಠಾಧಿಪತಿಗಳು, ಹಿರಿಯರು ವೀರಶೈವ ಧರ್ಮವನ್ನು ಒಂದಾಗಿ ಮುನ್ನಡೆಯುವಂತೆ ಮಾಡಬೇಕಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಗುರುವಾರ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ 33ನೇ ವರ್ಷದ ದಸರಾ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ಬಿಗೇರಿಯ ಕೆರೆಗೆ ಕಾಯಕಲ್ಪ ಕೊಡಬೇಕು ಎಂದು ವೀರಭದ್ರ ಶಿವಾಚಾರ್ಯ ಶ್ರೀಗಳು ವಿ. ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದರು. ಅಂತೆಯೇ ರೋಣ ಶಾಸಕ ಜಿ.ಎಸ್. ಪಾಟೀಲ, ಗದಗ-ಗಜೇಂದ್ರಗಡ- ವಾಡಿ ರೈಲ್ವೆ ಕಾಮಗಾರಿಗೆ ಮಂಜೂರಾತಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ, ರಾಜ್ಯದ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಬಾಕಿ ಇದೆ. ಆ ಎಲ್ಲ ಕಾಮಗಾರಿ ಮುಗಿಸಿ, ನಿಮ್ಮ ಬೇಡಿಕೆಗೆ ಸ್ಪಂದಿಸುವೆ. ಇನ್ನು ವಾರದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅಬ್ಬಿಗೇರಿ ಕೆರೆಗೆ ಕಾಯಕಲ್ಪ ನೀಡುವೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪವಿತ್ರವಾದುದು. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆದು ಬರಬೇಕಾಗಿದೆ. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು ಎಂದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮೈಸೂರಿನಲ್ಲಿ ಅರಮನೆಯ ದಸರಾ ನಡೆದರೆ ಅಬ್ಬಿಗೇರಿಯಲ್ಲಿ ಗುರು ಪೀಠದ ದಸರಾ ನಡೆಯುತ್ತಿದೆ. ಈ ಸಮಾರಂಭದಿಂದ ಸಮುದಾಯದಲ್ಲಿ ಆಧ್ಯಾತ್ಮ ಜ್ಞಾನ, ಸಾಮರಸ್ಯ, ಸದ್ಭಾವನೆ ಬೆಳೆಯುವುದರಲ್ಲಿ ಸಂದೇಹವಿಲ್ಲ ಎಂದರು.
ಅಬ್ಬಿಗೇರಿಯ ಕೆರೆಗೆ ಕಾಯಕಲ್ಪ ಕೊಡಬೇಕು ಎಂದು ವೀರಭದ್ರ ಶಿವಾಚಾರ್ಯ ಶ್ರೀಗಳು ವಿ. ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದರು. ಅಂತೆಯೇ ರೋಣ ಶಾಸಕ ಜಿ.ಎಸ್. ಪಾಟೀಲ, ಗದಗ-ಗಜೇಂದ್ರಗಡ- ವಾಡಿ ರೈಲ್ವೆ ಕಾಮಗಾರಿಗೆ ಮಂಜೂರಾತಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ, ರಾಜ್ಯದ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಬಾಕಿ ಇದೆ. ಆ ಎಲ್ಲ ಕಾಮಗಾರಿ ಮುಗಿಸಿ, ನಿಮ್ಮ ಬೇಡಿಕೆಗೆ ಸ್ಪಂದಿಸುವೆ. ಇನ್ನು ವಾರದಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅಬ್ಬಿಗೇರಿ ಕೆರೆಗೆ ಕಾಯಕಲ್ಪ ನೀಡುವೆ ಎಂದರು.
ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿದ್ಧರಬೆಟ್ಟ ಕ್ಷೇತ್ರ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ನವರಾತ್ರಿಯಲ್ಲಿ ಶಕ್ತಿ ಆರಾಧನೆ ಕುರಿತು ಲಕ್ಷ್ಮೇಶ್ವರದ ಡಾ. ಜಯಶ್ರೀ ಹೊಸಮನಿ ಮಾತನಾಡಿದರು. ಖನಿಜ ನಿಗಮದ ಅಧ್ಯಕ್ಷ, ರೋಣ ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ಸ್ವಾಗತಿಸಿದರು. ಅಬ್ಬಿಗೇರಿ ಗ್ರಾ.ಪಂ ಅಧ್ಯಕ್ಷ ನೀಲಪ್ಪ ದ್ವಾಸಲ, ಉಪಾಧ್ಯಕ್ಷೆ ಅಕ್ಕಮ್ಮ ಡೊಳ್ಳಿನ, ಆರ್.ಎಸ್. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮುಂತಾದವರು ಉಪಸ್ಥಿತರಿದ್ದರು.
ಸಮಾಜದ ಎಲ್ಲ ರಂಗಗಳಲ್ಲಿ ಹೆಚ್ಚುತ್ತಿರುವ ಸಂಘರ್ಷ ನಿಂತು ಶಾಂತಿ, ನೆಮ್ಮದಿ, ಸಾಮರಸ್ಯ ಬೆಳೆಸಿಕೊಂಡು ಬರುತ್ತಿರುವುದಕ್ಕೆ ಶ್ರೀ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಸಮಾರಂಭ ಸಾಕ್ಷಿಯಾಗಿದೆ. ನವರಾತ್ರಿ ಮೊದಲ ದಿನ ಶೈಲ ಪುತ್ರಿ ನಾಮಾಂಕಿತದಲ್ಲಿ ದೇವಿಯನ್ನು ಪೂಜಿಸುತ್ತಾರೆ. ಭೌತಿಕ ಸುಖದೆಡೆಗೆ ಆಕರ್ಷಿತರಾಗದೇ ಆತ್ಮಜ್ಞಾನ ಪಡೆಯಲು ಮುಂದಾಗಬೇಕು. ಶೈಲ ಪುತ್ರಿ ಶಕ್ತಿ ಆರಾಧನೆಯಿಂದ ಕೆಟ್ಟ ಪರಿಣಾಮ ಮತ್ತು ಅಪಶಕುನ ದೂರಾಗಿ ಬದುಕಿನಲ್ಲಿ ಶಾಂತಿ, ಸಂತೃಪ್ತಿ ಉಂಟಾಗುವುದು.
– ಶ್ರೀ ರಂಭಾಪುರಿ ಜಗದ್ಗುರುಗಳು.
ಶ್ರೀಪೀಠ, ಬಾಳೆಹೊನ್ನೂರು.
ವೀರಶೈವ ಎನ್ನುವುದು ಕೇವಲ ಜಾತಿಯಲ್ಲ. ಅದೊಂದು ತತ್ವ-ಸಿದ್ಧಾಂತ ಹೊಂದಿದ ಧರ್ಮ. ಆದರೆ ವೀರಶೈವ ಧರ್ಮ ಕಾಲಕಾಲಕ್ಕೆ ವಿಕಾಸವಾಗಿ ಒಳಪಂಗಡದ ಹೆಸರಿನಲ್ಲಿ ಕವಲು ದಾರಿ ಹಿಡಿದಿರುವುದು ಸರಿಯಲ್ಲ. ರಂಭಾಪುರಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳ ದಸರಾ ಧರ್ಮ ಸಮ್ಮೆಳನ ಜನರಲ್ಲಿ ಅರಿವಿನ ಪ್ರಜ್ಞೆ ಮೂಡಿಸುತ್ತದೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ ಮುಖ್ಯ ಎನ್ನುವುದು ಧರ್ಮದ ಮೂಲಮಂತ್ರ. ಧರ್ಮಗಳು ಹಲವು ಆದರೆ ಎಲ್ಲವೂ ಮಾನವ ಕಲ್ಯಾಣವನ್ನೇ ಪ್ರತಿಪಾದಿಸಿದೆ ಎಂದು ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.