ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ರೈತರ ಜಮೀನಿನಲ್ಲಿ ಬೆಳೆದ ಕಡಲೆ ಮತ್ತು ಹುಳ್ಳಿ ಬೆಳೆಯನ್ನು ಕುರಿಗಳು ಮೇಯ್ದು ಹಾಳು ಮಾಡಿದ್ದು, ರೈತರು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇಲ್ಲಿಯ ದೊಡ್ಡರ ಕಟ್ಟೆ ರಸ್ತೆಯ ಸೀಬಾರ ಹಳ್ಳದ ಹತ್ತಿರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಯನ್ನು ಕುರಿಗಾರರು ತಮ್ಮ ಕುರಿಗಳನ್ನು ಬಿಟ್ಟು ಮೇಯಿಸಿದ್ದು ಅಪಾರ ಪ್ರಮಾಣದ ಫಸಲು ನಷ್ಟವಾಗಿದೆ. ಗ್ರಾಮದ ಮಲ್ಲಪ್ಪ ಶಿವಪ್ಪ ಬಿನ್ನಾಳ ಅವರ 5 ಎಕರೆ ಕಡಲೆ, 1 ಎಕರೆ ಗೋಧಿ, 3 ಎಕರೆ ಹುಳ್ಳಿ, ನೀಲಪ್ಪ ಹಿರೇಹಾಳ ಅವರ 3 ಎಕರೆ ಕಡಲೆ, ಶಿವಪ್ಪ ಬಿನ್ನಾಳ ಅವರ 3 ಎಕರೆ ಹುಳ್ಳಿ ಹಾಗೂ ಭೀಮಪ್ಪ ಕರಿ ಅವರ 1 ಎಕರೆ ಕಡಲೆ, 1 ಎಕರೆ ಜೋಳದ ಬೆಳೆ ಹಾಗೂ ಫಕ್ಕೀರಗೌಡ ಗೌಡ್ರ ಅವರ 2 ಎಕರೆ ಕಡಲೆ ಬೆಳೆ ಫಸಲನ್ನು ಕುರಿಗಳು ಇತ್ತೀಚೆಗೆ ರಾತ್ರಿ ಸಮಯದಲ್ಲಿ ಮೇಯ್ದು ಹಾಳು ಮಾಡಿವೆ.
ಆಕ್ರೋಶಗೊಂಡ ರೈತರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ನಷ್ಟ ಮಾಡಿದ ಕುರಿ ಮಾಲೀಕರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಲಪ್ಪ ಹಿರೇಹಾಳ, ಮಲ್ಲಪ್ಪ ಬಿನ್ನಾಳ, ಶಿವಪ್ಪ ಬಿನ್ನಾಳ, ಭೀಮಪ್ಪ ಕರಿ, ಶಿವಪ್ಪ ಬಿನ್ನಾಳ, ಚಂದ್ರು ಛಬ್ಬರಭಾವಿ, ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ದೊಂಗಡೆ, ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಬಾಬರಿ ಆಗ್ರಹಿಸಿದ್ದಾರೆ.