ಕುರಿ ಕಳ್ಳತನ ತಡೆಗಟ್ಟಲು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಒತ್ತಾಯ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಮುಕ್ತಿಮಂದಿರದ ಹತ್ತಿರ ಕುರಿ ಕದಿಯಲು ಬಂದ ಇಬ್ಬರನ್ನು ಕುರಿಗಾಹಿಗಳು ಚಾಣಾಕ್ಷತನದಿಂದ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಘಟನೆ ವಿವರ
ಮುಕ್ತಿಮಂದಿರ ಹತ್ತಿರದ ಅಡವಿಯಲ್ಲಿ ಮೇಯುತ್ತಿದ್ದ ಕುರಿಗಳನ್ನು ಕದಿಯಲು ೨ ಬೈಕ್‌ನಲ್ಲಿ ಬಂದ ನಾಲ್ವರು ಒಂದು ಕುರಿಯನ್ನು ಕೈಕಾಲು, ಬಾಯಿ ಕಟ್ಟಿ ಕೆಡವಿದ್ದಾರೆ. ಇನ್ನೊಂದು ಕುರಿಯನ್ನು ಇದೇ ರೀತಿ ಮಾಡಲು ಯತ್ನಿಸುತ್ತಿದ್ದ ವೇಳೆ ಕುರಿಗಾಹಿ ಹುಡುಗ ಇದನ್ನು ಗಮನಿಸಿ ತನ್ನ ತಂದೆಗೆ ಹೇಳಿದ್ದಾನೆ. ಕೂಡಲೇ ಕಾರ್ಯಪ್ರವೃತ್ತನಾದ ಕುರಿಗಾಹಿ ಯಲ್ಲಪ್ಪ ಕಲ್ಲೂರ ತನಗೊಬ್ಬನಿಗೆ ಅವರನ್ನು ಹಿಡಿಯುವುದು ಕಷ್ಟ ಎಂದು ತಿಳಿದು ತಮ್ಮ ಆಪ್ತರಿಗೆ ಫೋನ್ ಮಾಡಿದ್ದಾನೆ. ಸ್ಥಳಕ್ಕೆ ಮುರ‍್ನಾಲ್ಕು ಜನ ಬರುತ್ತಿದ್ದಂತೆಯೇ ಗಮನಿಸಿದ ಬೈಕ್ ಸವಾರರು ಪರಾರಿಯಾಗಲು ಯತ್ನಿಸಿ ಅದರಲ್ಲಿ ಒಂದು ಬೈಕ್‌ನಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಇಬ್ಬರು ಬೈಕ್ ಮತ್ತು ಕುರಿ ಸಮೇತ ಸಿಕ್ಕಿಬಿದ್ದಿದ್ದಾರೆ.
ಕುರಿ ಕದಿಯಲು ಬೋಲೆರೂ ಗೂಡ್ಸ್ ವಾಹನವೂ ಬಂದಿತ್ತೆಂದು ಮತ್ತು ಎರಡು ದಿನಗಳ ಹಿಂದಷ್ಟೇ ಎರಡು ಕುರಿಗಳು ಕಳ್ಳತನವಾಗಿವೆ ಎಂದು ಕುರಿಗಾಹಿಗಳಾದ ಯಲ್ಲಪ್ಪ ಕಲ್ಲೂರ, ರಮೇಶ ಕೋಳಿವಾಡ ಮತ್ತಿತರರು ಆರೋಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಈ ಇಬ್ಬರೂ ಅಣ್ಣಿಗೇರಿ ಸಮೀಪದ ಮಜ್ಜಿಗುಡ್ಡ ಗ್ರಾಮದವರೆಂದು ಗೊತ್ತಾಗಿದೆ ಎಂದು ಪೊಲೀಸರಿಂದ ತಿಳಿದುಬಂದಿದೆ.
ಹನಮಂತಪ್ಪ ಯಲ್ಲಪ್ಪ ಮಾದರ ಮತ್ತು ವಸಂತ ಯಲ್ಲಪ್ಪ ಮಾದರ ಸಹೋದರರಾಗಿದ್ದಾರೆ. ಇವರ ಜತೆಗೆ ಬಂದಿದ್ದವರು ಯಾರ‍್ಯಾರೆಂಬುದು ತನಿಖೆಯಿಂದ ಹೊರಬರಬೇಕಿದೆ.
ಲಕ್ಷ್ಮೇಶ್ವರ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುರಿಗಳ ಕಳ್ಳತನ ಆಗುತ್ತಿದ್ದು, ಕುರಿಗಾಹಿಗಳು ಭೀತಿಗೊಂಡಿದ್ದಾರೆ ಮತ್ತು ಕಳ್ಳತನದಿಂದ ಸಾಕಷ್ಟು ಬಾರಿ ಹಾನಿ ಅನುಭವಿಸುತ್ತಿದ್ದಾರೆ. ವಶಕ್ಕೆ ಪಡೆದ ಕಳ್ಳರಿಂದ ಮಾಹಿತಿ ಪಡೆದು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಪ್ರ.ಕಾರ್ಯದರ್ಶಿ ನೀಲಪ್ಪ ಪಡಗೇರಿ, ಗ್ರಾಪಂ ಸದಸ್ಯ ಅಣ್ಣಪ್ಪ ರಾಮಗೇರಿ ಮತ್ತಿತತರು ಆಗ್ರಹಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಕುರಿ ಕದ್ದ ಕಳ್ಳರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಪಿಎಸ್‌ಐ ಪ್ರಕಾಶ ಡಿ ತಿಳಿಸಿದ್ದಾರೆ.