ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸರಕಾರದ ಬೆಂಬಲ ಬೆಲೆ ಖರೀದಿ ಯೋಜನೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆ ಬಂದ್ ಆಗಿದ್ದು, ಕೂಡಲೇ ಪ್ರಾರಂಭಿಸುವಂತೆ ಆಗ್ರಹಿಸಿ ಕೃಷಿಕ ಸಮಾಜ ನವದೆಹಲಿ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಖಿ ನೇತೃತ್ವದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ ಮೂಲಕ ಜಿಲ್ಲಾಧಿಕಾರಿಗಳಿಗೆ ರೈತರು ಬುಧವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮತ್ತು ಮಾಡಳ್ಳಿಯ ರೈತ ಮುಖಂಡ ಸುರೇಶ ಸಿಂದಗಿ, ಎಣ್ಣೆ ಬೀಜ ಬೆಳೆಗಾರರ ಸೊಸೈಟಿಯ ಬೆಂಬಲ ಖರೀದಿ ಕೇಂದ್ರದಲ್ಲಿ ಜಿಲ್ಲೆಯಲ್ಲಿ 1464 ರೈತರು ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಸರಕಾರದ ಶೇಂಗಾ ಖರೀದಿ ಹಾಗೂ ನೋಂದಣಿ ಪ್ರಕ್ರೀಯೆ ಬಂದ್ ಆಗಿ 15 ದಿನಗಳು ಕಳೆದಿದ್ದು, ಕೆಂದ್ರದ ಮುಂದೆ ಕಾಯುತ್ತಿದ್ದಾರೆ. ಇತ್ತ ಖರೀದಿ ಕೇಂದ್ರಕ್ಕೆ ತಂದಿಟ್ಟ ಶೇಂಗಾ ಚೀಲಗಳನ್ನು ವಾಪಸ್ಸು ತೆಗೆದುಕೊಂಡು ಹೋಗಲು ಕೇಂದ್ರದವರು ಹೇಳುತ್ತಿದ್ದಾರೆ. 15-20 ದಿನಗಳಿಂದ ಕಾಯ್ದಿಟ್ಟ ಶೇಂಗಾ ತೂಕದಲ್ಲಿಯೂ ಕಡಿಮೆಯಾಗುವದಲ್ಲದೆ, ಇವುಗಳ ಸಾಗಾಟ ವೆಚ್ಚ, ಹಮಾಲಿ ವೆಚ್ಚದಿಂದ ರೈತರಿಗೆ ಸಾಕಷ್ಟು ಹಾನಿಯಾಗಲಿದೆ.
ಅಲ್ಲದೆ ಕಡಲೆ ಬೆಳೆ ಬೆಂಬಲ ಖರೀದಿ ಪ್ರಕ್ರೀಯೆ ಲಾಗಿನ್ ಸಹ ಓಪನ್ ಆಗಿಲ್ಲ. ರೈತರು ಬೆಂಬಲ ಬೆಲೆಯಲ್ಲಿ ಹೆಚ್ಚಿನ ದರ ದೊರೆಯಬಹುದು ಎನ್ನುವ ಆಸೆ ಕಮರುತ್ತಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಶೇಂಗಾ ಖರೀದಿ ಪ್ರಕ್ರೀಯೆ ಪ್ರಾರಂಭಿಸುವದು, ಕಡಲೆ ಬೆಳೆ ಖರೀದಿ ಕೇಂದ್ರದ ಲಾಗಿನ್ ಓಪನ್ ಮಾಡಬೇಕೆಂದು ಒತ್ತಾಯಿಸಿದರು.
ಮುಖ್ಯವಾಗಿ ಈ ಬಾರಿ ಬೆಳೆಹಾನಿ, ಬೆಳೆವಿಮೆ ಮಧ್ಯಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ವಿಮಾ ಕಂಪನಿಯಿಂದ ಹಾಗೂ ಇಲಾಖೆಯಿಂದ ಯಾವುದೇ ಉತ್ತರ ದೊರಕುತ್ತಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ತಹಸೀಲ್ದಾರ ಕಚೇರಿ ಎದುರು ಧರಣಿ ಕುಳಿತುಕೊಳ್ಳುವದಾಗಿ ಎಚ್ಚರಿಸಿದರು.
ರೈತರಾದ ಟಾಕಪ್ಪ ಸಾತಪುತೆ, ಚನ್ನಬಸಪ್ಪ ಲಿಂಗಶೆಟ್ಟಿ, ಸಿದ್ರಾಮಗೌಡ ಸಾಲ್ಮನಿ, ಸುಧೀರಗೌಡ ಸಾಲ್ಮನಿ, ಉದಯ ಹೂಗಾರ, ಮಂಜುನಾಥ ಕಳಸದ, ಕುಬೇರಪ್ಪ ಕುರಿ, ಮಂಜುನಾಥ ರಾಚನಗೌಡ್ರ, ಹನುಮಂತಪ್ಪ ಚಿಂಚಲಿ, ಈರಬಸಪ್ಪ ಜಿಡ್ಡಿಯವರ ಸೇರಿದಂತೆ ತಾಲೂಕಿನ ಅನೇಕ ಹಳ್ಳಗಳಿಂದ ರೈತರು ಪಾಲ್ಗೊಂಡಿದ್ದರು.
ರೈತರ ಮನವಿ ಸ್ವೀಕರಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ, ಫೆ.11ರಂದು ಲಕ್ಮೇಶ್ವರದಲ್ಲಿ ಕೃಷಿ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಮತ್ತು ಈ ಕುರಿತಂತೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿ ಅವರ ಆದೇಶದ ಪ್ರಕಾರ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ಅವರಿಗೂ ಸಹ ರೈತರು ಮನವಿ ಸಲ್ಲಿಸಿದರು.