ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದ ಪ್ರಮುಖ ಆರೋಪಿ ರಾಜೀವ್ ಗೌಡ ಕೊನೆಗೂ ಪೊಲೀಸ್ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಅಡಗಿಹೋಗಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಖಾಕಿ ಪಡೆ ಖೆಡ್ಡಾಗೆ ಕೆಡವಿದೆ.
ಪೊಲೀಸರ ತನಿಖೆ ಅತ್ಯಂತ ಕುತೂಹಲಕರ ರೀತಿಯಲ್ಲಿ ಸಾಗಿದ್ದು, ರಾಜೀವ್ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಮಾಹಿತಿಯೇ ದೊಡ್ಡ ಬ್ರೇಕ್ಥ್ರೂ ಆಗಿದೆ. ಆ ಆಧಾರದ ಮೇಲೆ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಆರೋಪಿ ಮಂಗಳೂರಿನಲ್ಲಿ ಮರೆತು ಕುಳಿತಿದ್ದಾನೆ ಎಂಬ ಸುಳಿವು ಲಭ್ಯವಾಗಿದೆ.
ಇನ್ನೂ ಗಂಭೀರವಾಗಿ, ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ರಾಜೀವ್ ಗೌಡಗೆ ಆಶ್ರಯ ನೀಡಿದ್ದಾನೆ ಎಂಬ ಮಾಹಿತಿ ದೃಢಪಟ್ಟಿದೆ. ಫೋನ್ ನಂಬರ್ ಸಿಗದ ಕಾರಣ, ಪೊಲೀಸರು ಮೈಕಲ್ ಹಿನ್ನೆಲೆಯನ್ನು ಆಧಾರವಾಗಿ ತೆಗೆದುಕೊಂಡು ಚಾಣಾಕ್ಷ ತಂತ್ರ ರೂಪಿಸಿದ್ದಾರೆ.
ಮೈಕಲ್ ಪುತ್ರನ ಹಳೆಯ ಪ್ರಕರಣವನ್ನು ನೆಪವಾಗಿ ಸಂಪರ್ಕ ಸಾಧಿಸಿ, ಅಂತಿಮವಾಗಿ ಫೋನ್ ಟ್ರೇಸ್ ಮಾಡುವ ಮೂಲಕ ಮೈಕಲ್ ಮತ್ತು ರಾಜೀವ್ ಇಬ್ಬರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂದಿನ ತನಿಖೆಯಿಂದ ಇನ್ನಷ್ಟು ವಿಚಾರಗಳು ಬಹಿರಂಗವಾಗುವ ಸಾಧ್ಯತೆ ಇದೆ.



