ಶಿರಹಟ್ಟಿ ಉಪನೋಂದಣಿ ಕಚೇರಿಯಲ್ಲಿ ಮಿತಿಮೀರಿದ ಮಧ್ಯವರ್ತಿಗಳ ಹಾವಳಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಮೀಸಲು ಮತಕ್ಷೇತ್ರದ ಕೇಂದ್ರಸ್ಥಳದ ಜೊತೆಗೆ ತಾಲೂಕಾ ಆಡಳಿತದ ಶಕ್ತಿ ಕೇಂದ್ರವಾಗಿದೆ. ಹೀಗಾಗಿ ಇಲ್ಲಿ ನಿತ್ಯವೂ ವಿವಿಧ ಕೆಲಸ-ಕಾರ್ಯಗಳಿಗೆ ಗ್ರಾಮೀಣ ಪ್ರದೇಶಗಳ ಜನತೆ ಆಗಮಿಸುತ್ತಾರೆ. ಪ್ರಮುಖವಾಗಿ ಶಿರಹಟ್ಟಿಯ ಉಪನೋಂದಣಿ ಕಚೇರಿಯಲ್ಲಿ ಹಲವು ತಿಂಗಳುಗಳಿAದ ಅಧಿಕೃತ ಬರಹಗಾರರನ್ನು ಮೀರಿಸುವಂತೆ ಮಧ್ಯವರ್ತಿಗಳ ದರ್ಬಾರ್ ಹೆಚ್ಚಾಗುತ್ತಿದ್ದು, ಇದಕ್ಕೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಇಲ್ಲಿಯ ಪ್ರಜ್ಞಾವಂತರನ್ನು ಕಾಡುತ್ತಿದೆ.

Advertisement

ಶಿರಹಟ್ಟಿಯ ಉಪ ನೋಂದಣಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಖಾಯಂ ಉಪನೋಂದಣಾಧಿಕಾರಿ ಹುದ್ದೆ ಖಾಲಿ ಇದ್ದು, ತಾತ್ಕಾಲಿಕವಾಗಿ ಇಲಾಖೆಯು ಬೇರೆ ಕಡೆಯಿಂದ ಸಿಬ್ಬಂದಿಗಳನ್ನು ನಿಯೋಜಿಸಿ ಕೆಲಸ-ಕಾರ್ಯಗಳು ನಡೆಯುವಂತೆ ಅನುಕೂಲ ಕಲ್ಪಿಸಿದೆ. ಆಡಳಿತ ಸುಗಮವಾಗಿ ಹಾಗೂ ಪಾರದರ್ಶಕತೆಯಿಂದ ಇರುವ ಉದ್ದೇಶಕ್ಕಾಗಿ ಇತ್ತೀಚೆಗೆ ಸರಕಾರ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಈ ಕೆಲಸ-ಕಾರ್ಯಗಳನ್ನು ಮಾಡುವುದಕ್ಕೆ ಅಧಿಕೃತ ದಸ್ತಾವೇಜು ಬರಹಗಾರರು ಸಹ ಇದ್ದಾರೆ. ಇವರನ್ನು ಮೀರಿಸುವಂತೆ ಕೆಲವು ಮಧ್ಯವರ್ತಿಗಳು ಹಾಗೂ ಏಜೆಂಟರು ಈ ಕೆಲಸಗಳನ್ನು ನಾವೇ ಮಾಡಿಸಿಕೊಡುತ್ತೇವೆಂದು ನಂಬಿಸಿ ತಮಗಿಷ್ಟ ಬಂದಂತೆ ಸಾರ್ವಜನಿಕರಿಂದ ಹಣ ಪಡೆಯುವುದನ್ನೇ ಇಲ್ಲಿ ಕೆಲವರು ದಂಧೆಯನ್ನಾಗಿಸಿಕೊಂಡಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಇತ್ತೀಚೆಗೆ ಸರಕಾರ ಪ್ರತಿ ಇಲಾಖೆಯಲ್ಲಿಯೂ ಸಹ ಆಡಳಿತ ವ್ಯವಸ್ಥೆಯನ್ನು ಸುಗಮವಾಗಿಸಲು ಮತ್ತು ಪಾರದರ್ಶಕತೆಯಿಂದ ಕೂಡಿರಬೇಕೆನ್ನುವ ಉದ್ದೇಶದಿಂದ ಆನ್‌ಲೈನ್ ವ್ಯವಸ್ಥೆ ಹಾಗೂ ನೇರವಾಗಿ ಸಾರ್ವಜನಿಕರೇ ಕಚೇರಿಗೆ ಆಗಮಿಸಿ ಅರ್ಜಿಯನ್ನು ಸಲ್ಲಿಸಬೇಕೆಂದು ಸೂಚನೆ ನೀಡುತ್ತಿರುವುದು ಶ್ಲಾಘನೀಯ. ಆದರೆ ಈ ವ್ಯವಸ್ಥೆಗೆ ಮಾರಕವೆಂಬಂತೆ ಮಧ್ಯವರ್ತಿಗಳು ಹಾಗೂ ಏಜೆಂಟರುಗಳು ಸರಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದಕ್ಕೆ ಬ್ರೇಕ್ ಹಾಕುವುದು ಅವಶ್ಯಕವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಪನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ, ಉಪನೊಂದಣಾಧಿಕಾರಿ ಕಡೆಯಿಂದ ವರದಿ ತೆಗೆದುಕೊಂಡು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗುವುದು ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ ಅಭಿಮಾನಿ ಸಂಘದ ತಾಲೂಕಾಧ್ಯಕ್ಷ ಬಸವರಾಜ ಕಂಬಳಿ ಹಾಗೂ ಉಪಾಧ್ಯಕ್ಷ ಜಗದೀಶ ಇಟ್ಟೇಕಾರ, ಶಿರಹಟ್ಟಿ ಉಪನೋಂದಣಿ ಕಚೇರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಂದ ಸರಕಾರದ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಇದನ್ನು ಸಂಬಂಧಿಸಿದ ಅಧಿಕಾರಿಗಳು ನಿಯಂತ್ರಿಸಬೇಕು ಎಂದರು.


Spread the love

LEAVE A REPLY

Please enter your comment!
Please enter your name here