ಶಿರಸಂಗಿ ಲಿಂಗರಾಜರ ಬದುಕು ಅನುಕರಣೀಯ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಶಿರಸಂಗಿ ಲಿಂಗರಾಜರ ಕೊಡುಗೆ ಅಗಾಧವಾದುದು. ಲಿಂಗಾಯತ ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನೇ ಧಾರೆಯೆರೆದಿದ್ದಾರೆ. ಶಿರಸಂಗಿ ಲಿಂಗರಾಜರ ತ್ಯಾಗಗುಣ, ಸಮಾಜಮುಖಿ ಬದುಕು, ನಡೆ-ನುಡಿ, ಆದರ್ಶಗಳು ಅನುಕರಣೀಯ ಎಂದು ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2730ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಿರಸಂಗಿ ಲಿಗರಾಜರು ಮಾಡಿದ ಲಿಂಗಾಯತ ಸಮ್ಮೇಳನದ ಅಂದಿನ ಭಾಷಣ ಮಹತ್ವಪೂರ್ಣವಾಗಿತ್ತು. ಮೀಸಲಾತಿ ಹಾವಳಿ ಅಂದು ಇರಲಿಲ್ಲ. ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳು ಒಂದಾಗಿದ್ದವು. ಲಿಂಗಾಯತ ಸಮಾಜದ ಹಿರಿಯರಾದ ಫ.ಗು ಹಳಕಟ್ಟಿಯವರು, ಅರಟಾಳ ರುದ್ರಗೌಡರು, ಡೆಪ್ಯುಟಿ ಚನ್ನಬಸಪ್ಪನವರು ಮುಂತಾದ ಹಿರಿಯರ ಕೊಡುಗೆ ಅಪಾರ. ಲಿಂಗರಾಜರ ತ್ಯಾಗವನ್ನು ಜನ ತಿಳಿಯಬೇಕು. ನಿರಂತರ ನೆನೆಯಬೇಕು. ಅವರ ಬದುಕು, ಸಾಧನೆ, ನಡೆ-ನುಡಿಗಳು ತುಂಬಾ ವೈಶಿಷ್ಟ್ಯವಾಗಿದೆ. ಲಿಂಗರಾಜರು ಕಷ್ಟಗಳನ್ನು ಸಹಿಸಿಕೊಂಡು ಕಲ್ಲಾಗು, ಕಷ್ಟಗಳು ಮಳೆ ಸುರಿಯೆ ಎಂಬಂತೆ ಗಟ್ಟಿಯಾಗಿ ವೀರರಾಗಿ, ಧೀರಗಾಗಿ, ಬದುಕಿದವರು ಎಂದರು.

ಬಸವಾನಂದ ಸ್ವಾಮಿಗಳು ಬರೆದ ‘ವಚನ ಹೃದಯ’ ಪುಸ್ತಕ ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ. ಲಿಂಗಾಯತ ಧರ್ಮಕ್ಕಾಗಿ ದುಡಿದ, ಲಿಂಗರಾಜ ಜಯಂತಿಯ ಆಚರಣೆ ಸಂದರ್ಭದಲ್ಲಿ ವಚನ ಹೃದಯ ಪುಸ್ತಕ ಲೋಕಾರ್ಪಣೆಗೊಂಡಿದ್ದು ವಿಶೇಷ ಎಂದರು.

` ವಚನ ಹ್ಲದಯ’ ಪುಸ್ತಕ ಪರಿಚಯ ಮಾಡಿದ ಗುರುಬಸವ ಮಹಾಮನೆ ಚೆನ್ನಯ್ಯನಗಿರಿ ಮನಗುಂಡಿಯ ಪೂಜ್ಯ ಬಸವಾನಂದ ಸ್ವಾಮಿಗಳು, ವಚನ ಹೃದಯದಲ್ಲಿ 30 ಅಧ್ಯಾಯಗಳಿವೆ. ಮೊದಲ ಭಾಗದಲ್ಲಿ ಸುಮಾರು 35ಕ್ಕೂ ಹೆಚ್ಚು ಶರಣರ ವಚನಗಳ ಅಂತರಂಗದ ಬಾಗಿಲು ತೆರೆದು ತೋರಿಸಿದೆ. ಎರಡನೇ ಭಾಗ ಶರಣರ ವಚನಾಂಕಿತಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.

ಅತಿಥಿಗಳಾಗಿ ಶಿದ್ರಾಮಪ್ಪ ಗೊಜನೂರ, ಈಶಣ್ಣ ಮುನವಳ್ಳಿ, ಅನಿಲ ಪಾಟೀಲ, ಬಸವರಾಜ ಬಿಂಗಿ, ಮಹೇಶ್ಗೌಡ ಪಾಟೀಲ್ ಹಾಗೂ ಡಾ. ಹನುಮಾಕ್ಷಿ ಗೋಗಿ ಉಪಸ್ಥಿತರಿದ್ದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನೇರವೇರಿಸಿದರು. ಧರ್ಮಗ್ರಂಥ ಪಠಣವನ್ನು ಶ್ರೇಯಾ ಜಾಲಿಹಾಳ, ವಚನಚಿಂತನವನ್ನು ರಕ್ಷಿತಾ ಬಳಿಗೇರ ನಡೆಸಿದರು. ದಾಸೋಹ ಸೇವೆಯನ್ನು ಶಿವಯೋಗಿ ಹುಬ್ಬಳ್ಳಿ ಸಹೋದರರು ಹಾಗೂ ಅಖಿಲ ಕರ್ನಾಟಕ ಲಿಂಗಾಯತ ಕುಡು ಒಕ್ಕಲಿಗರ ಸಮಾಜದ ರಾಜ್ಯಾಧ್ಯಕ್ಷ ಶಿವಕುಮಾರಗೌಡ ಪಾಟೀಲ ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಸಹ ಚೇರಮನ್ ಶಿವಾನಂದ ಹೊಂಬಳ ಪರಿಚಯಿಸಿದರು. ಉಪಾಧ್ಯಕ್ಷರಾದ ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜು ಪ್ರಾಧ್ಯಾಪಕ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಲಿಂಗರಾಜರ ನವಲಗುಂದ ವಾಡೆಯ ಅಭಿವೃದ್ಧಿ ಆಗಬೇಕಿದೆ. ಭಾರತದ ಹಲವಾರು ಸಂಸ್ಥಾನಗಳಲ್ಲಿ ಲಿಂಗರಾಜ ದೇಸಾಯಿ ಅವರ ಸಂಸ್ಥಾನ ಗಟ್ಟಿಯಾಗಿ ನಿಂತು ಲಿಂಗಾಯತ ಸಮಾಜದ ಮಕ್ಕಳ ಶಿಕ್ಷಣಕ್ಕೆ ಅವಿರತವಾಗಿ ಪರಿಶ್ರಮಿಸುತ್ತ ಬಂದಿದೆ. ಸಮಾಜ ಸಂಘಟನೆಗಳಿಗೆ ಹಲವು ದತ್ತಿ ದಾನಗಳನ್ನು ಮಾಡಿದ್ದಲ್ಲದೆ ಇಡೀ ಸರ್ವಸ್ವವನ್ನು ಸಮಾಜಕ್ಕಾಗಿ ಧಾರೆಯೆರೆದ ಧೀರೋದಾತ್ತರು ಎಂದರು.


Spread the love

LEAVE A REPLY

Please enter your comment!
Please enter your name here