ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇವರು, ದೇವಮಾನವರಲ್ಲಿ ಅಚಲವಾದ ನಂಬಿಕೆ, ವಿಶ್ವಾಸವಿರಿಸಿಕೊಂಡರೆ ಅದು ಖಂಡಿತ ಶ್ರೇಷ್ಠವಾದ ಫಲವನ್ನೇ ನೀಡುತ್ತದೆ. ದೇವರ ಸನ್ನಿಧಿಯಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಬೆಳಗುವ ಧರ್ಮದ ದೀಪದಿಂದ ಮನುಷ್ಯನಲ್ಲಿನ ಅರಿಷಡ್ವರ್ಗಗಳು ಕಳೆದು, ಸುಜ್ಞಾನದ ಬೆಳಕು ಹರಿದು ಬದುಕು ಬಂಗಾರವಾಗುತ್ತದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಶ್ರೀ ಜ.ಫಕೀರ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಶ್ರೀ ಆನಂದಮಯೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಸಿದ್ಧಲಿಂಗಯ್ಯಶಾಸ್ತಿçಗಳು ಹಿರೇಮಠ ಮತ್ತು ಶಿಷ್ಯವೃಂದದ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ವಿಶೇಷ ಪೂಜೆ, ರುದ್ರಾಭಿಷೇಕ, ಗಣಹೋಮ, ಮೃತ್ಯುಂಜಯ, ಬೃಹಸ್ಪತಿ ಹೋಮ, ಅಕ್ಷರಾಭ್ಯಾಸ, ಪಂಚಾರತಿ, ಸಂಜೆ ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಸೇವೆ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಆಶೀರ್ವಾದ ನೀಡಿದರು.
ದೇವರೊಬ್ಬ ನಾಮ ಹಲವು. ನಾವು ಮಾಡುವ ಕಾರ್ಯದಲ್ಲಿ ದೇವರು, ಧರ್ಮವನ್ನು ಕಾಣಬೇಕು. ಶಿರಡಿ ಶ್ರೀ ಸಾಯಿಬಾಬಾರನ್ನು ಹಿಂದೂ, ಮುಸ್ಲಿಂ ಸೇರಿದಂತ ಎಲ್ಲ ಧರ್ಮದ ಅನುಯಾಯಿಗಳು ಪೂಜಿಸುತ್ತಾರೆ. ಅವರ ಅನುಯಾಯಿಗಳು ಅವರನ್ನು ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸುತ್ತಾರೆ. ಅವರು ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಅವರು ಪ್ರೀತಿ, ಕ್ಷಮೆ, ಇತರರಿಗೆ ಸಹಾಯ ಮಾಡುವುದು, ದಾನ, ನೆಮ್ಮದಿ, ಆಂತರಿಕ ಶಾಂತಿ, ದೇವರು ಮತ್ತು ಗುರುವಿನ ಭಕ್ತಿಯನ್ನು ಹೊಂದಿ ಸಮಾಜಕ್ಕೆ ಬೆಳಕಾಗಿದ್ದಾರೆ. ಇಂತಹ ಪುಣ್ಯ ಪುರುಷರ ಸ್ಮರಣೆಯೊಂದಿಗೆ ದೀಪ ಬೆಳಗಿಸುವುದರಿಂದ ನಮ್ಮೆಲ್ಲರ ಬಾಳು ಬೆಳಕಾಗುತ್ತದೆ ಎಂದರು.
ಸಂಜೆ ಕಾರ್ತಿಕೋತ್ಸವದಲ್ಲಿ ಪಟ್ಟಣ ಸೇರಿ ಸುತ್ತಲಿನ ಗ್ರಾಮದಿಂದ ನೂರಾರು ಭಕ್ತರು ಆಗಮಿಸಿದ್ದರು. ದೀಪೋತ್ಸವದ ಬಳಿಕ ಸಾರ್ವಜನಿಕ ಪ್ರಸಾದ ಸೇವೆ ಮಾಡಲಾಗಿತ್ತು. ಭಕ್ತರಾದ ರಾಮು ಗಡದವರ, ರಾಜಣ್ಣ ಕುಂಬಿ, ವಿಜಯ ಹತ್ತಿಕಾಳ, ಅಶ್ವಿನಿ ಅಂಕಲಕೋಟಿ, ಸಂತೋಷ ಬಾಳಿಕಾಯಿ, ಶಂಕರ ಬ್ಯಾಡಗಿ, ದಿಳ್ಳೆಪ್ಪ ಅಮರಾಪುರ, ಶೇಖಣ್ಣ ಹತ್ತಿಕಾಳ, ಸೋಮೇಶ ಉಪನಾಳ, ಪ್ರವೀಣ ಬೋಮಲೆ, ನೀಲಪ್ಪ ಶರಸೂರಿ, ನೀಲಕಂಠಪ್ಪ ಬಂಕಾಪುರ, ರಾಮು ಅಡಗಿಮನಿ, ವಾಣಿ ಮಠಪತಿ, ವಿಜಯಕ್ಕ ಪಿಳ್ಳಿ, ರಾಜೇಶ್ವರಿ ಮೊಗಲಿ, ಸರೋಜಾ ಬನ್ನೂರ, ಯಲ್ಲಪ್ಪ ಕುಂಬಾರ, ಫಕ್ಕಿರೇಶ ಅಡರಕಟ್ಟಿ, ಅಣ್ಣಪ್ಪ ಸಂಶಿ, ಮಲ್ಲೇಶ ಕಿತ್ತೂರ ಮುಂತಾದವರಿದ್ದರು.
ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯರು ಆಶೀರ್ವಾದ ನೀಡಿ, ದೀಪ ತಾನುರಿದು ಕತ್ತಲೆ ಸರಿಸಿ ಜಗಕೆ ಬೆಳಕು ನೀಡುವಂತೆ ಮನುಷ್ಯ ಪರಸ್ಪರ ಸ್ನೇಹ, ಪ್ರೀತಿ, ಕರುಣೆ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳಿಂದ ಸಮಾಜಕ್ಕೆ ಬೆಳಕಾಗುವ ಕೆಲಸ ಮಾಡಬೇಕು. ಪರಿಶುದ್ಧ ಮತ್ತು ಸತ್ಯಧರ್ಮನಿಷ್ಠತೆಯಿಂದ ತನ್ನ ಬಳಿ ಬರುವ ಭಕ್ತರ ಕಷ್ಟ-ಸಂಕಟಗಳನ್ನು ಸಂತ ಸದ್ಗುರು ಸಾಯಿಬಾಬಾ ಅವರು ದೂರ ಮಾಡಿ ಶಾಂತಿ, ಸಮೃದ್ಧಿ, ಸುಖ, ನೆಮ್ಮದಿ ಕರುಣಿಸುತ್ತಾರೆ. ಒಬ್ಬ ವ್ಯಕ್ತಿಯು ಲೌಕಿಕ ಜೀವನದ ದುಃಖಗಳನ್ನು ಹೋಗಲಾಡಿಸಲು ಬಯಸಿ ಸಾಯಿಬಾಬಾರನ್ನು ಆರಾಧಿಸಿದರೆ ಅದು ಖಂಡಿತವಾಗಿಯೂ ನೆರವೇರುತ್ತದೆ ಎಂದರು.



