ಬೆಂಗಳೂರು: ದೆಹಲಿಯಲ್ಲಿ ನಡೆದ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ ವೇಳೆ ಸಭಾಂಗಣದೊಳಗೆ ಶರ್ಟ್ ಬಿಚ್ಚಿ ಘೋಷಣೆ ಕೂಗಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಸೂಚಿಸಿದ್ದಾರೆ.
ಯೂತ್ ಕಾಂಗ್ರೆಸ್ ಮುಖಂಡರ ಬಂಧನವನ್ನು ಖಂಡಿಸಿದ ಖರ್ಗೆ, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಸಹಜ. ದೇಶದ ಹಿತಕ್ಕಾಗಿ ಇಂತಹ ಪ್ರೊಟೆಸ್ಟ್‌ಗಳು ನಡೆಯುತ್ತವೆ” ಎಂದು ಹೇಳಿದ್ದಾರೆ. ಕೆಲ ಕಾಂಗ್ರೆಸ್ ನಾಯಕರುಲೇ ಈ ನಡೆಯನ್ನು ಖಂಡಿಸಿದ್ದ ನಡುವೆಯೇ ಖರ್ಗೆ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
“ಕಾಮನ್‌ವೆಲ್ತ್ ಗೇಮ್ಸ್ ವೇಳೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿರಲಿಲ್ಲವಾ? ಯೂತ್ ಕಾಂಗ್ರೆಸ್ ಗಮನ ಸೆಳೆಯಲು ಪ್ರೊಟೆಸ್ಟ್ ನಡೆಸಿದೆ” ಎಂದು ಖರ್ಗೆ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಯೂತ್ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮಾತನಾಡಿರುವುದನ್ನು ಉಲ್ಲೇಖಿಸಿ, ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಾಗಿ ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಪ್ರಧಾನಿ ಮೋದಿ ಕೇಳುತ್ತಿದ್ದಾರೆ, ಅವರು ಸರೆಂಡರ್ ಆಗಿದ್ದಾರೆ ಎಂಬ ಗಂಭೀರ ಆರೋಪವನ್ನೂ ಖರ್ಗೆ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಮುಖ್ಯ ಎಂದು ಅವರು ಎಚ್ಚರಿಸಿದ್ದರು.
ಭಾರತ್ ಮಂಟಪಂನಲ್ಲಿ ನಡೆದ ಎಐ ಶೃಂಗಸಭೆ ವೇಳೆ 10 ಮಂದಿ ಯೂತ್ ಕಾಂಗ್ರೆಸ್ ನಾಯಕರು ಏಕಾಏಕಿ ಶರ್ಟ್ ಕಳಚಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಟಿ-ಶರ್ಟ್‌ಗಳನ್ನು ಪ್ರದರ್ಶಿಸಿ ಗಮನ ಸೆಳೆಯಲು ಯತ್ನಿಸಿದರು.
ಪೊಲೀಸ್ ತನಿಖೆಯಲ್ಲಿ, ನೇಪಾಳದ ಜೆನ್ ಝಿ ಪ್ರತಿಭಟನೆಯಿಂದ ಪ್ರೇರಿತವಾಗಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.



