ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದ ಮಣ್ಣು ತೆರವು ಕಾರ್ಯಾಚರಣೆಗೆ ಇಂದಿಗೆ 13 ದಿನಗಳಾಗಿವೆ. ಗುಡ್ಡ ಕುಸಿದಿರುವ ಸ್ಥಳದಲ್ಲಿ ನಾಪತ್ತೆಯಾಗಿದ್ದ ಅರ್ಜುನ್, ಜಗನ್ನಾಥ್ ನಾಯ್ಕ್, ಲೋಕೇಶ್ಗಾಗಿ ನೌಕಾಪಡೆ ಸೇರಿದಂತೆ ಮಿಲಿಟರಿ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಲೇ ಇದ್ದಾರೆ. ಇದುವರೆಗೆ 8 ಜನರ ಶವ ಹೊರ ತೆಗೆಯಲಾಗಿದ್ದು, ಇನ್ನುಳಿದ ಮೂವರಿಗಾಗಿ ನಿರಂತರ ಶೋಧ ನಡೆಸಿದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ ಅಂತಾ ಖುದ್ದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಮಾಹಿತಿ ನೀಡಿದ್ದಾರೆ.
ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಲೋಕೇಶ್ ನಾಯ್ಕ ಹಾಗೂ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಚಾಲಕ ಅರ್ಜುನ್ಗಾಗಿ ತೀವ್ರ ಶೋಧ ನಡೆಸಲಾಗಿತ್ತು. ನಿನ್ನೆಯಿಂದ ಉಡುಪಿಯ ಪರಿಣಿತ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನ ತಂದು ಗಂಗಾವಳಿ ನದಿಯಲ್ಲಿ ಶೋಧ ನಡೆಸಲಾಗಿತ್ತು. ಆದರೆ ಅದು ಎಷ್ಟೆ ಕಾರ್ಯಾಚರಣೆ ನಡೆಸಿದರೂ ಸಹ ನಾಪತ್ತೆ ಆದವರ ಹಾಗೂ ಲಾರಿ ಪತ್ತೆ ಆಗದೆ ಇರುವ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ ತಿಳಿಸಿದ್ದಾರೆ.