ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹೂವಿನಶಿಗ್ಲಿ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಸಂಸ್ಕಾರ ಕಾರ್ಯಕ್ರಮ ಸೋಮವಾರ ಲಕ್ಮೇಶ್ವರ ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ನೆರವೇರಿತು.
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚಿ ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ. ವಿಭೂತಿ, ಲಿಂಗ, ಜೋಳಿಗೆ, ದಂಢ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂಗದೀಕ್ಷೆಯಿಂದ ಆಧ್ಯಾತ್ಮಿಕ ಜ್ಞಾನ, ಬದುಕಿನ ಶಾಂತಿ, ನೆಮ್ಮದಿಗೆ ಪೂರಕವಾದ ಅಂತಃಶಕ್ತಿ ವೃದ್ಧಿಸುತ್ತದೆ. ನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆ, ಧ್ಯಾನ, ಪ್ರಾರ್ಥನೆ ರೂಡಿಸಿಕೊಳ್ಳಬೇಕು. ಗುರು ಹಿರಿಯರಿಗೆ ಗೌರವ ನೀಡುವುದು, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬೆಳೆಸುವ ಮೊದಲಾದ ಗುಣಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಹೇಳಿದರು. ಹತ್ತಾರು ವಟುಗಳಿಗೆ ಲಿಂಗದೀಕ್ಷೆ ಕರುಣಿಸಲಾಯಿತು.
ಬಳಿಕ ಹತ್ತಿಮತ್ತೂರಿನ ಶ್ರೀ ನಿಜಗುಣ ಶ್ರೀಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹೂವಿನಶಿಗ್ಲಿ ಮಠವು ಗ್ರಾಮೀಣ ಭಾಗದ ಬಡವರು, ಅನಾಥ ಮಕ್ಕಳಿಗೆ ಹತ್ತಾರು ಸಂಕಷ್ಟಗಳ ನಡುವೆಯೂ ತ್ರಿವಿಧ ದಾಸೋಹ ಸೇವೆಯ ಜತೆಗೆ ಲಿಂ. ನಿರಂಜನ ಶ್ರೀಗಳು ಹಾಕಿಕೊಟ್ಟ ಮಠದ ಪರಂಪರೆ ಉಳಿಸುವದರೊಂದಿಗೆ ಧರ್ಮ, ಸಂಸ್ಕಾರಗಳನ್ನು ಬಿತ್ತುವ ಕೆಲಸ ಮಾಡುತ್ತಾ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಶ್ರೀಗಳ ಶ್ರೇಷ್ಠತಮನಾದ ಸಮಾಜೋಪಯೋಗಿ ಕಾರ್ಯಕ್ಕೆ ಭಕ್ತರ ಸಹಾಯ-ಸಹಕಾರ ಅಗತ್ಯ ಎಂದರು.
ಶ್ರೀಮಠದ ಚನ್ನವೀರಮಹಾಸ್ವಾಮಿಗಳು ಮಾತನಾಡಿ, ಹೂವಿನಶಿಗ್ಲಿ ಸೇರಿ ನಾಡಿನಾದ್ಯಂತ ಇರುವ ಭಕ್ತರು ಮಾಡುತ್ತಿರುವ ತನು-ಮನ-ಧನದ ಸೇವಾಕಾರ್ಯದಿಂದ ಮಠದಲ್ಲಿ ತ್ರಿವಿಧ ಸೇವೆ, ಜಾತ್ರೆ, ಮಹೋತ್ಸವ, ಪರಂಪರೆ ಉಳಿಸಿಕೊಂಡು ಬರಲು ಸಾಧ್ಯವಾಗುತ್ತಿದೆ ಎಂದರು. ಈ ವೇಳೆ ಹೂವಿನಶಿಗ್ಲಿ, ತೆಲಂಗಾಣ, ಸೋನಾಳದ ಭಕ್ತರು ಭಾಗವಹಿಸಿದ್ದರು. ಶಿಕ್ಷಕ ಕೆ.ಎಸ್. ಇಟಗಿಮಠ ನಿರೂಪಿಸಿದರು.