ನಮ್ಮ ದೇಶದಲ್ಲಿ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲಿ ಪ್ರಮುಖವಾದ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಒಂದಾಗಿದೆ. ಈ ಹಬ್ಬವು ಮಾರ್ಚ್ ತಿಂಗಳ ಮಾಘ ಮಾಸದ ತ್ರಯೋದಶಿಯಂದು ಆಚರಿಸಲಾಗುತ್ತದೆ.
ಇಂದು ಶಿವನಿಗೆ ಪ್ರಿಯವಾದ ದಿನ, ಇದುವೇ ಮಹಾ ಶಿವರಾತ್ರಿ ದಿನ. ಈ ಮಹಾಶಿವರಾತ್ರಿಯಂದು ಶಿವನ ನಾಮಸ್ಮರಣೆಯೊಂದಿಗೆ ಜಾಗರಣೆ ಮಾಡುತ್ತಾರೆ ಹಾಗೂ ಉಪವಾಸ ವೃತ ಕೈಗೊಳ್ಳುತ್ತಾರೆ. ಶಿವರಾತ್ರಿಯಂದು ಕೈಲಾಸದಲ್ಲಿರುವ ಪರಶಿವನನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ. ಶಂಭೋಶಂಕರನನ್ನು ನೆನೆದು ಜೀವನವನ್ನು ಪಾವನ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹಬ್ಬಗಳನ್ನು ಹಗಲಿನಲ್ಲಿ ಆಚರಿಸಿದರೆ ಶಿವರಾತ್ರಿಯನ್ನು ರಾತ್ರಿಯಲ್ಲಿ ಆಚರಣೆ ಮಾಡಲಾಗುತ್ತದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಕರುಣಿಸು ಎಂದು ಶಿವನನ್ನು ಬೇಡುವ ಈ ಶುಭಗಳಿಯೇ ಶಿವರಾತ್ರಿ.
ಶಿವನು ಅಜ್ಞಾನದ ಅಂಧಕಾರದಲ್ಲಿ ಸಂಚರಿಸಿ ಸುಜ್ಞಾನದ ಸುಧೆಯನ್ನು ಹರಡುತ್ತಾನೆ ಎಂಬ ನಂಬಿಕೆ ಇದೆ.
ಶಿವ ಬಿಲ್ವಪತ್ರ ಪ್ರಿಯ, ಬಿಲ್ವ ಪತ್ರದ ದಳ ಹೃದಯವನ್ನು ಹೋಲುತ್ತದೆ. ಶಿವಲಿಂಗ ಪರಮಾತ್ಮನ ಪ್ರತೀಕ.
ಆದ್ದರಿಂದ ಇವೆರಡರ ಸಮ್ಮಿಲನದಿಂದ ಆತ್ಮ ಪರಮಾತ್ಮನಾಗುತ್ತಾನೆ. ಶಿವರಾತ್ರಿ ದಿನ ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಶಿವನು ಸರಳ, ಪ್ರಮಾಣಿಕತೆ ಮತ್ತು ನಿಷ್ಕಲ್ಮಶಗಳ ಪ್ರತಿಕವಾಗಿದ್ದಾನೆ. ಭಕ್ತಿಯಿಂದ ಧ್ಯಾನ ಮಾಡಿದರೆ ಶಿವನು ಪ್ರಸನ್ನಗೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಕೈಲಾಸ ವಾಸಿ ಶಿವನಿಗೆ ಅತ್ಯಂತ್ತ ಪ್ರೀತಿಯ ದಿನ ತನನ್ನು ನಿಷ್ಠೆಯಿಂದ ಪೂಜಿಸಿದವರಿಗೆ ಇಷ್ಟಾರ್ಥಗಳನ್ನು ನೀಡುವುದಾಗಿ ಶಿವನು ಪಾರ್ವತಿಯಲ್ಲಿ ಹೇಳಿದ್ದಾನೆ ಎನ್ನುವುದು ಶಿವಪುರಾಣದಲ್ಲಿ ಕಾಣಬಹುದು.
ಪರ್ವತ ರಾಜನ ಮಗಳಾದ ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನಾಮವನ್ನು ಭಕ್ತಿಯಿಂದ ಪಠಿಸುತ್ತಾ ಶಿವನನ್ನು ಮೆಚ್ಚಿ ವಿವಾಹವಾದ ದಿನ. ಈ ದಿನವನ್ನು ಶಿವಪಾರ್ವತಿ ಕಲ್ಯಾಣೋತ್ಸವ ದಿನ ಎಂದು ಕರೆಯಲಾಗುತ್ತದೆ. ಶಿವನು ರುದ್ರ ತಾಂಡವವಾಡಿದ ರಾತ್ರಿಯೂ ಇದೇ ಎನ್ನಲಾಗಿದೆ.
ದೇವತೆಗಳು ಹಾಗೂ ಅಸುರರು ಸಮುದ್ರ ಮಂಥನ ನಡೆಸಿ ಹಾಲಾಹಲ ಉದ್ಭವಿಸಿದಾಗ ಅದನ್ನು ಶಿವನು ಕುಡಿದ. ವಿಷ ಗಂಟಲೊಳಗೆ ಹೋಗಬಾರದೆಂದು ಪಾರ್ವತಿಯು ಶಿವನ ಗಂಟಲನ್ನು ಬಿಗಿ ಹಿಡಿದು ಇಡೀ ರಾತ್ರಿ ತಡೆದಳು ಎಂದು ಶಿವ ಪುರಾಣದಲ್ಲಿ ಉಲ್ಲೇಖವಿದೆ. ಅಂದಿನಿಂದ ನೀಲಂಕಠ ಎಂಬ ನಾಮಧೇಯವಾಯಿತು. ಶಿವನು ಆಭರಣ ಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಭಸ್ಮ ಪ್ರಿಯನಾಗಿದ್ದಾನೆ. ಭಸ್ಮವನ್ನು ಬಳಿದುಕೊಂಡು ಹುಲಿ ಚರ್ಮವನ್ನು ಸುತ್ತಿಕೊಂಡು ಸ್ಮಶಾನದಲ್ಲಿರುವ ಅಮೋಘ ಶಕ್ತಿಯ ಶಿವನಾಗಿದ್ದಾನೆ.
ಈ ದಿನ ಹೆಣ್ಣುಮಕ್ಕಳು ಶಿವಗುಣರೂಪಿಯಾಗಿ, ಗುಣಗಳುಳ್ಳ ಪತಿಗಾಗಿ ಪಾರ್ಥಿಸುತ್ತಾರೆ. ಹಾಗೆ ಮುತ್ತೆöÊದೆಯರು ಪತಿಯ ಶ್ರೇಯೋಬಿವೃದ್ಧಿಗಾಗಿ ಪೂಜಿಸುತ್ತಾರೆ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರಿ ಸುಖ, ಶಾಂತಿ, ನೆಮ್ಮದಿ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಪ್ರತಿ ವರ್ಷ ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ರಾತ್ರಿ ಸಮಯದಲ್ಲಿ ಶಿವ-ಪಾರ್ವತಿಯರು ಲೋಕ ಸಂಚಾರ ಮಾಡುತ್ತಾ ಶಿವಲಿಂಗಗಳಿಗೆ ಭೇಟಿ ನೀಡಿ ಸಂಕ್ರಮಣಗೊಳಿಸುತ್ತಾರೆ. ಈ ರಾತ್ರಿ ಯಾರು ಶಿವನ ನಾಮ ಜಪ ಮಾಡುತ್ತಾರೊ ಅವರ ಪಾಪ ತೊಳೆದು ಪುಣ್ಯವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ದೇವರ ದೇವ ಮಹಾದೇವನಾದ ಶಿವನನ್ನು ಬ್ರಹ್ಮ, ವಿಷ್ಣು ಆದಿಯಾಗಿ ದೇವತೆಗಳೆಲ್ಲರೂ ಪೂಜಿಸುತ್ತಾರೆ.
ರಾತ್ರಿಯು ಅಜ್ಞಾನದ ಸಂಕೇತ. ಈ ವೇಳೆ ನಿದ್ದೆ ಮಾಡದೆ ಭಕ್ತಿಯಿಂದ ಪೂಜಿಸಿದರೆ ತಿಳುವಳಿಕೆಯ ಕಡೆ ತಿರುಗಿದಂತೆ. ಜಾಗರಣೆ ಎಂದರೆ ಜಾಗೃತವಾಗಿರುವುದು ಎಂದರ್ಥ. ರಾತ್ರಿ ಎನ್ನುವುದು ತಮೋಗುಣದ ಪ್ರತೀಕವಾಗಿದೆ. ಈ ಸಮಯದಲ್ಲಿ ಎಚ್ಚರವಾಗಿರುವುದರಿಂದ ನಮ್ಮಲ್ಲಿರುವ ಆಲಸ್ಯ, ಅಹಂಕಾರ ಗುಣಗಳು ದೂರವಾಗುತ್ತವೆ.
ಈ ದಿನದಂದು ಕಾಶಿ ವಿಶ್ವನಾಥ, ರಾಮೇಶ್ವರ, ಮಹಾಬಲೇಶ್ವರ, ಗೋಕರ್ಣನಾಥೇಶ್ವರ, ಬನವಾಸಿ ಮಧುಕೇಶ್ವರ, ಮುರುಡೇಶ್ವರ ಹೀಗೆ ರಾಜ್ಯ, ದೇಶಾದ್ಯಂತ ಶಿವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶಿವನಿಗೆ ಹಾಲು, ಮೊಸರು, ತುಪ್ಪ ಹಾಗೂ ಜೇನು ತುಪ್ಪದಲ್ಲಿ ಅಭಿಷೇಕ ಮಾಡುವ ಪದ್ಧತಿ ಇದೆ. ಈ ದಿನ ಪ್ರತಿಯೊಬ್ಬರೂ ರಾತ್ರಿಯಿಡೀ ಜಾಗರಣೆ ಮಾಡಿ ನಸುಕಿನ ಜಾವದಲ್ಲಿ ಮಡಿಯಿಂದ ಶಿವ ದೇವಾಲಯಗಳಿಗೆ ಹೋಗಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಶಿವನು ತನ್ನ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಕರುಣಿಸುತ್ತಾನೆ. ಶಿವನು ಈ ಲೋಕದ ಎಲ್ಲ ಜೀವರಾಶಿಗಳಿಗೆ ಸುಖ, ನೆಮ್ಮದಿ, ಸಮೃದ್ಧಿ, ಸಂಪತ್ತು ಕರುಣಿಸಲಿ. ಮಳೆ-ಬೆಳೆ ಚೆನ್ನಾಗಿ ಬರಲಿ ಎಂದು ಶಿವನಲ್ಲಿ ಮತ್ತೊಮ್ಮೆ ಪ್ರಾರ್ಥಿಸೋಣ.
– ಎಸ್.ಕೆ. ಆಡಿನ.
ಶಿಕ್ಷಕರು, ಹೊಳೆಆಲೂರು.