ಭದ್ರಾವತಿ: ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಿಮಿಯಾ ತಡೆಗಟ್ಟಲು ನೀಡಿದ ಖನಿಜಾಂಶ ಮಾತ್ರೆ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ.
ವಾರಕ್ಕೆ ಒಮ್ಮೆ ವಿದ್ಯಾರ್ಥಿಗಳಿಗೆ ಅನಿಮಿಯಾ ತಡೆಗಟ್ಟುವ ಉದ್ದೇಶದಿಂದ ಖನಿಜಾಂಶ ಮಾತ್ರೆ ನೀಡಲಾಗುತ್ತದೆ. ಅದರಂತೆ ಇಂದು ಮಧ್ಯಾಹ್ನ ಶಾಲೆಯಲ್ಲಿ ಮಾತ್ರೆ ವಿತರಿಸಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಸರ್ಕಾರಿ ಶಾಲೆಯಲ್ಲಿ, ಮಾತ್ರೆ ಸೇವಿಸಿದ ಬಳಿಕ ಏಕಾಏಕಿ 59 ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾದರು.
ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ವಿದ್ಯಾರ್ಥಿಗಳಿಗೆ ಜೀವಾಪಾಯವಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ (ಟಿಎಚ್ಒ) ಹಾಗೂ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ನಾಗೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.



