ಶಿವಮೊಗ್ಗ: ಸಾಲದ ವಿಚಾರಕ್ಕೆ ಗಂಡ- ಹೆಂಡತಿಯ ನಡುವೆ ಜಗಳ ನಡೆದು ಪತಿಯೊರ್ವ ಪತ್ನಿಯ ಮೂಗನ್ನೇ ಹಲ್ಲಿನಿಂದ ಕಚ್ಚಿ ತುಂಡರಿಸಿದ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.
ಪತ್ನಿ ವಿದ್ಯಾ (30) ರ ಮೂಗಿನ ಮುಂಭಾಗ ಸಂಪೂರ್ಣ ತುಂಡಾಗಿದ್ದು, ವಿದ್ಯಾ ಅವರ ಪತಿ ವಿಜಯ್ ಈ ಕೃತ್ಯ ಎಸಗಿದ್ದಾನೆ. ಜುಲೈ 8ರಂದು ಮಧ್ಯಾಹ್ನ, ದಂಪತಿಗೆ ಸಾಲದ ಕಂತು ಕಟ್ಟುವ ವಿಚಾರವಾಗಿ ಗಲಾಟೆ ನಡೆದಿದ್ದು, ವಿಚಾರ ವಿಕೋಪಕ್ಕೆ ತಿರುಗಿ ಪತಿ ವಿಜಯ್ ಪತ್ನಿಗೆ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ.
ಗಲಾಟೆ ವೇಳೆ ಕೆಳಗೆ ಬಿದ್ದ ಪತ್ನಿ ವಿದ್ಯಾ ಅವರ ಮೂಗನ್ನೇ ವಿಜಯ್ ಹಲ್ಲಿನಿಂದ ಕಚ್ಚಿ ಕಡಿದು ಹಾಕಿದ್ದಾನೆ. ಗಾಯಗೊಂಡ ವಿದ್ಯಾಳನ್ನು ಸ್ಥಳೀಯರು ಕೂಡಲೇ ಚೆನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ಪ್ರಾಥಮಿಕವಾಗಿ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಮೆಡಿಕೋ ಲೀಗಲ್ ಕೇಸ್ ದಾಖಲಾಗಿದ್ದು, ಬಳಿಕ ಪತ್ನಿಯ ದೂರಿನ ಆಧಾರದಲ್ಲಿ ಚೆನ್ನಗಿರಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಎಫ್ಐಆರ್ ದಾಖಲಿಸಿರುವ ಚೆನ್ನಗಿರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.