ಶಿವಮೊಗ್ಗ/ಸಾಗರ: ಸಿಗಂದೂರಿನಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ನಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಘಟನೆ ಹುಲಿದೇವರಬನದ ಬಳಿ ನಡೆದಿದೆ.
ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಸಿಗಂದೂರು ಕ್ಷೇತ್ರದಿಂದ ವಾಪಸ್ ಆಗುತ್ತಿದ್ದ ಬಸ್ ಹುಲಿದೇವರಬನದ ಸಮೀಪ ಬರುತ್ತಿದ್ದಾಗ, ಏಕಾಏಕಿ ಬಸ್ನೊಳಗಿನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಬಸ್ನ್ನು ತಡೆದು, ಚಾಲಕ ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಗ್ರಾಮಸ್ಥರು ಮತ್ತು ಬಸ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರು ಶ್ಲಾಘಿಸಿದ್ದಾರೆ.



