ಬೆಂಗಳೂರು: ಅವಧಿ ಮುಗಿದು ಎರಡೂವರೆ ವರ್ಷ ಕಳೆದಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಹಾಗೂ ಹೊಳಲ್ಕೆರೆ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ರಾಜ್ಯ ಚುನಾವಣಾ ಆಯೋಗ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೂ ನೋಟಿಸ್ ನೀಡಲಾಗಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಗೆ 2018ರ ಆಗಸ್ಟ್ 31ರಂದು ಚುನಾವಣೆ ನಡೆದಿದ್ದು, ಐದು ವರ್ಷದ ಅವಧಿ 2023ರ ಆಗಸ್ಟ್ 30ರಂದು ಮುಗಿದಿದೆ. ಬಳಿಕ 2023ರ ನವೆಂಬರ್ 27ರಂದು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಕಳೆದ ಎರಡೂವರೆ ವರ್ಷಗಳಿಂದ ಪಾಲಿಕೆ ಆಡಳಿತಾಧಿಕಾರಿಯ ಆಡಳಿತದಲ್ಲಿದೆ. ಕಾಯ್ದೆ ಪ್ರಕಾರ ಅವಧಿ ಮುಗಿದ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಾಗಿದ್ದರೂ ಇದುವರೆಗೆ ಚುನಾವಣೆ ನಡೆಯದಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ನಗರದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ ಎಂದು ಅರ್ಜಿದಾರರು ದೂರಿದ್ದಾರೆ. ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ಬೀದಿ ದೀಪಗಳಂತಹ ಮೂಲಭೂತ ನಾಗರಿಕ ಸೇವೆಗಳ ಮೇಲ್ವಿಚಾರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಜೊತೆಗೆ ಪಾಲಿಕೆಯ ನಿಧಿಗಳ ಬಳಕೆ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲೂ ಪಾರದರ್ಶಕತೆ ಇಲ್ಲದಿರುವುದರಿಂದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಎಂದು ಹೇಳಲಾಗಿದೆ.
ಅಲ್ಲದೆ, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯಿದೆ ಸೆಕ್ಷನ್ 7 ಮತ್ತು 9ರ ಪ್ರಕಾರ ಸ್ಥಳೀಯ ಸಂಸ್ಥೆಯ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸಬೇಕಾಗಿದೆ. ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಕಾನೂನು ಹಾಗೂ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ದೀರ್ಘಕಾಲ ಚುನಾವಣೆ ನಡೆಸದಿರುವುದು ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಉಲ್ಲಂಘನೆಯಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಚುನಾವಣೆಯನ್ನು ತಕ್ಷಣ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.



