ಶಿವಮೊಗ್ಗ: ಇಲ್ಲಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಜೈಲು ಸಿಬ್ಬಂದಿಯೇ ನಡೆಸಿದ ಅನಿರೀಕ್ಷಿತ ಕಾರ್ಯಾಚರಣೆಯಲ್ಲಿ ಅನೇಕ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ಜೈಲಿನೊಳಗೆ ಗಾಂಜಾ ಸೇರಿದಂತೆ ಅಕ್ರಮ ವಸ್ತುಗಳು ಹರಿದಾಡುತ್ತಿರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಕಾರಾಗೃಹ ಅಧಿಕಾರಿಗಳು ಇತ್ತೀಚೆಗೆ ರಾತ್ರಿ ಸುಮಾರು 8 ಗಂಟೆಗೆ ತಪಾಸಣೆ ನಡೆಸಿದರು. ಈ ವೇಳೆ ಜೈಲಿನೊಳಗಿನಿಂದ 3 ಮೊಬೈಲ್ ಫೋನ್‌ಗಳು, 4 ಸಿಮ್ ಕಾರ್ಡ್‌ಗಳು, 3 ಡೇಟಾ ಕೇಬಲ್‌ಗಳು, 2 ಇಯರ್‌ಫೋನ್‌ಗಳು ಹಾಗೂ 1 ಚಾರ್ಜರ್ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೈಲಿನೊಳಗಿನ ಅಕ್ರಮಗಳನ್ನು ಬಯಲಿಗೆಳೆದ ಜೈಲು ಅಧಿಕಾರಿಗಳ ಕಾರ್ಯವನ್ನು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕ ಅಲೋಕ್ ಕುಮಾರ್ ಶ್ಲಾಘಿಸಿದ್ದು, ಕರ್ತವ್ಯ ನಿಷ್ಠೆ ತೋರಿದ ತಂಡಕ್ಕೆ ಪ್ರೋತ್ಸಾಹವಾಗಿ 10,000 ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಶಿವಮೊಗ್ಗದ ಮುಖ್ಯ ಜೈಲು ಅಧೀಕ್ಷಕ ರಂಗನಾಥ್ ಅವರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಕಾವೇರಿ ವಿಭಾಗದಲ್ಲಿ ಈ ಅನಿರೀಕ್ಷಿತ ತಪಾಸಣೆಯಲ್ಲಿ ಭಾಗವಹಿಸಿದ್ದರು.



