ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಕೊಟ್ಟ ಶಿವಾನಂದ ಪಾಟೀಲ್: ಸಚಿವರ ಈ ನಿರ್ಧಾರಕ್ಕೆ ಕಾರಣ?

0
Spread the love

ಬೆಂಗಳೂರು:– ರಾಜ್ಯ ರಾಜಕೀಯದಲ್ಲಿ ಇಂದು ಮಹತ್ವದ ಬೆಳವಣಿಗೆ ಒಂದು ನಡೆದಿದೆ. ತಮ್ಮ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ್ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸ್ಪೀಕರ್ ಯುಟಿ ಖಾದರ್‌ ಅವರಿಗೆ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದು, ಈ ಬೆಳವಣಿಗೆ ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Advertisement

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬೆನ್ನಲ್ಲೆ ಬಸನಗೌಡ ಪಾಟೀಲ್‌ ಯತ್ನಾಳ್‌, ಉಗ್ರಾವತಾರದ ಮಾತುಗಳನ್ನಾಡುತ್ತಿದ್ದರು, ಈ ಹಂತದಲ್ಲಿ ಪ್ರತಿಕ್ರಿಯೆ ವೇಳೆ ಕಾಂಗ್ರೆಸ್‌‍ನ ಶಾಸಕರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಸಚಿವ ಶಿವಾನಂದ ಪಾಟೀಲ್‌ ಹಾಗೂ ಹುನಗುಂದ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರಿಗೆ ಯತ್ನಾಳ್‌ ಸವಾಲು ಹಾಕಿದ್ದರು.

ಇಬ್ಬರು ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ, ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಶಿವಾನಂದ ಪಾಟೀಲ್‌ ಇಂದು ತಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶಿವಾನಂದ ಪಾಟೀಲ್ ಹೇಳಿದ್ದೇನು?

ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ಯತ್ನಾಳ್ ಅವರ ಸವಾಲು ಸ್ವೀಕಾರ ಮಾಡಿ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೂ, ಸಿಎಂಗೂ ಇದು ಸಂಬಂಧಿಸಿಲ್ಲ ಎಂದು ಹೇಳಿದರು.

ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್‌. ಶುಕ್ರವಾರದೊಳಗೆ ರಾಜೀನಾಮೆ ಕೊಡದಿದ್ದರೆ ಅವರಪ್ಪನಿಗೆ ಹುಟ್ಟಿಲ್ಲ ಎಂದಿದ್ದರು. ಅದಕ್ಕೆ ಈಗ ನಾನು ರಾಜೀನಾಮೆ ನೀಡಿದ್ದೇನೆ. ಹೀಗಾಗಿ ಯತ್ನಾಳ್ ಕೂಡ ರಾಜೀನಾಮೆ ಕೊಡಲಿ. ವಿಜಯಪುರದಲ್ಲಾದ್ರೂ ಸರಿ, ಬಸವನಬಾಗೇವಾಡಿಯಲ್ಲಾದ್ರೂ ಸರಿ ಅವರ ಎದುರು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

ಯತ್ನಾಳ್ ಅವರ ತಂದೆ ತಾಯಿಗಳಿಗೆ ಹುಟ್ಟಿದ್ದಾರೆ. ನಾನು ಆ ಮಾತುಗಳನ್ನ ಆಡಲ್ಲ. ಆದರೆ ನನ್ನ ಪೂರ್ವಜರ ಬಗ್ಗೆ ಪಾಟೀಲ್ ಹೆಸರಿನ ಬಗ್ಗೆ ಮಾತನಾಡಿದ್ದಕ್ಕೆ ನೋವಾಗಿದೆ ಎಂದು ಬೇಸರ ಹೊರ ಹಾಕಿದರು.

ನನ್ನ ಪೂರ್ವಜರು ಹಿಂದೆ ಬೇರೆ ಅಡ್ಡ ಹೆಸರು ಇಟ್ಟುಕೊಂಡಿರಬಹುದು ಗೊತ್ತಿಲ್ಲ. ನನಗೆ ಹುಟ್ಟಿನಿಂದ ಪಾಟೀಲ್ ಅಂತಾ ಹೆಸರು ಇಟ್ಟಿದ್ದಾರೆ. ವೈಯುಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಮಾತುಗಳನ್ನು ಸಹಿಸಲು ಆಗಲ್ಲ ಎಂದು ಸಿಟ್ಟು ಹೊರಹಾಕಿದರು.


Spread the love

LEAVE A REPLY

Please enter your comment!
Please enter your name here