ನಟ ಶಿವರಾಜ್ ಕುಮಾರ್ ಇಂದು ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ಹಲವರು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಹೊರಟ ಶಿವರಾಜ್ ಕುಮಾರ್ ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಹೆಲ್ತ್ ಚೆಕಪ್ ಮಾಡಿಸಿದ್ದೀನಿ. ಎಲ್ಲವೂ ಸರಿಯಾಗಿದೆ. ಎಲ್ಲಾ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ ಎಂದು ಹೇಳುತ್ತಾ ಭಾವುಕರಾದರು.
‘ಎಲ್ಲರಿಗೂ ಇರುವಂಥದ್ದೇ. ನಾವು ಕೂಡ ಸ್ವಲ್ಪ ಎಮೋಷನಲ್ ಆಗುತ್ತೇವೆ. ಅದು ಸಹಜ. ಇಲ್ಲಿ ಪರೀಕ್ಷೆ ಮಾಡಿಸಿದಾಗ ಎಲ್ಲ ಲಕ್ಷಣಗಳು ಚೆನ್ನಾಗಿವೆ. ಆದರೂ ಕೂಡ ಒಂದು ಆತಂಕ ಇದ್ದೇ ಇರುತ್ತದೆ. ಮನೆಯಿಂದ ಹೋಗುತ್ತಿದ್ದೇವಲ್ಲ.. ತಂಗಿ ಹಾಗೂ ಸಂಬಂಧಿಕರನ್ನೆಲ್ಲ ನೋಡುವಾಗ ಸ್ವಲ್ಪ ಎಮೋಷನಲ್ ಆಯಿತು. ಅಭಿಮಾನಿಗಳು ಕೂಡ ಇದ್ದಾರೆ. ಸ್ವಲ್ಪ ದುಃಖ ಆಗಿದೆ ಹೊರತೂ ಇನ್ನೇನೂ ಇಲ್ಲ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
‘ನಾನು ಆತ್ಮವಿಶ್ವಾಸದಿಂದ ಇದ್ದೇನೆ. ಡಿಸೆಂಬರ್ 24ರಂದು ಸರ್ಜರಿ ನಡೆಯುತ್ತದೆ. ಅದರ ಬಗ್ಗೆ ಏನೂ ಯೋಚನೆ ಇಲ್ಲ. ಕಡಿಮೆ ಅವಧಿ ಆದರೆ ಪರವಾಗಿಲ್ಲ. ಆದರೆ 35 ದಿನ ಮನೆಯಿಂದ, ಭಾರತದಿಂದ ಹೊರಗೆ ಇರುತ್ತೇನೆ ಎಂಬ ನೋವು ಇರುತ್ತದೆ. ಎಲ್ಲರ ಹಾರೈಕೆ ಇದೆ. ಅಭಿಮಾನಿಗಳು, ಮಾಧ್ಯಮದವರು ಕಾಳಜಿ ತೋರಿಸಿದ್ದಾರೆ. ಆರೋಗ್ಯ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಕೂಡ ಯಾರೂ ಅದನ್ನು ವೈಭವಿಕರಿಸಿಲ್ಲ. ಅದು ನನಗೆ ಖುಷಿ ಕೊಟ್ಟಿದೆ. ಅಷ್ಟು ಪ್ರೀತಿ ಮತ್ತು ಗೌರವ ನನ್ನ ಮೇಲೆ ಇಟ್ಟಿದ್ದಾರೆ’. ಜ.26ಕ್ಕೆ ನಾನು ಬೆಂಗಳೂರಿಗೆ ಹಿಂದಿರುಗುತ್ತಿದ್ದೇನೆ ಎಂದರು.
ಇದೇ ವೇಳೆ ಸುದೀಪ್ ಭೇಟಿಯ ಬಗ್ಗೆ ಶಿವಣ್ಣ ಮಾತನಾಡಿ, ಅವರು ಬಂದಿದ್ದು ಖುಷಿಯಾಯ್ತು. ಯಾರು ಯೋಚನೆ ಮಾಡುವಂತಹದ್ದು ಏನು ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರು. ನಂತರ ‘ಯುಐ’ ಮತ್ತು ‘ಮ್ಯಾಕ್ಸ್’ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಎರಡು ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಶಿವಣ್ಣ ಶುಭ ಹಾರೈಸಿದರು.