ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವಯಸ್ಸಿಯಲ್ಲೂ ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಳ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಶಿವರಾಜ್ ಕುಮಾರ್ ಲುಕ್ ನೋಡಿ ಪ್ರತಿಯೊಬ್ಬರು ಹ್ಯಾಟ್ಸ್ ಆಫ್ ಅಂತಿದ್ದಾರೆ.
ಸದ್ಯ ಶಿವರಾಜ್ ಕುಮಾರ್ ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ. ಜನಗಳ ನಾಯಕ ಎಂದೇ ಹೆಸರಾಗಿರುವ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವಣ್ಣ ನಟಿಸಲಿದ್ದು, ಪೋಸ್ಟರ್ ಬಿಡುಗಡೆ ಆಗಿದೆ. ಸದ್ಯ ಪೊಸ್ಟರ್ ವೈರಲ್ ಆಗಿದ್ದು ಶಿವಣ್ಣನ ಲುಕ್ ನೋಡಿ ಪ್ರತಿಯೊಬ್ಬರು ಖುಷಿಯಾಗಿದ್ದಾರೆ.
ಗುಮ್ಮಡಿ ನರಸಯ್ಯ, ತೆಲುಗು ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಶಾಸಕ (ಈಗ ಮಾಜಿ), ಹೋರಾಟಗಾರ. ಜನ ಸೇವೆಯಲ್ಲೇ ಜೀವನ ಸವೆಸಿರುವ ವ್ಯಕ್ತಿ. ಈಗಿನ ತೆಲಂಗಾಣ ರಾಜ್ಯಕ್ಕೆ ಸೇರಿರುವ ಖಮ್ಮಂ ಜಿಲ್ಲೆಯ ಇಲ್ಲಂದು ಕ್ಷೇತ್ರದಿಂದ ಬರೋಬ್ಬರು ಐದು ಬಾರಿ ಶಾಸಕರಾಗಿರುವ ವ್ಯಕ್ತಿ. ಸಿಪಿಐ (ಎಂಎಲ್-ನ್ಯೂ ಡೆಮಾಕ್ರಸಿ) ಪಕ್ಷಕ್ಕೆ ಸೇರಿದ ಗುಮ್ಮಡಿ ನರಸಯ್ಯ, ತಮ್ಮ ಸೇವೆಯ ಜೊತೆಗೆ ತಮ್ಮ ಸರಳತೆಯಿಂದಲೂ ಖ್ಯಾತಿ ಘಳಿಸಿದ್ದವರು.
ಗುಮ್ಮಡಿ ನರಸಯ್ಯ, ಕಾಲ್ನಡಿಗೆಯಲ್ಲಿ ಹೈದರಾಬಾದ್ಗೆ ವಿಧಾನಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು. ಅದರ ಬಳಿಕ ಒಂದು ಸೈಕಲ್ ಖರೀದಿ ಮಾಡಿ ಸೈಕಲ್ನಲ್ಲಿ ಅಸೆಂಬ್ಲಿಗೆ ಬರುತ್ತಿದ್ದರು. ಶಾಸಕನಾಗಿ ಬರುವ ಸಂಬಳವನ್ನೆಲ್ಲ ತಮ್ಮ ಪಕ್ಷಕ್ಕೆ ನೀಡಿ ಬಿಡುತ್ತಿದ್ದ ಗುಮ್ಮಡಿ ನರಸಯ್ಯ ತಮ್ಮ ಜೀವಿತ ಕಾಲದಲ್ಲಿ ಒಂದೇ ಒಂದು ಆಸ್ತಿಯನ್ನು ಸಹ ಖರೀದಿಸಿಲ್ಲ. ಈಗಲೂ ಬ್ಯಾಂಕ್ ಖಾತೆಯಲ್ಲಿ ಏನೆಂದರೆ ಏನೂ ಹಣವಿಲ್ಲ. ಆದರೆ ಕೋಟ್ಯಂತರ ಜನರ ಪ್ರೀತಿ, ಅಭಿಮಾನವನ್ನು ಗುಮ್ಮಡಿ ನರಸಯ್ಯ ಗಳಿಸಿದ್ದಾರೆ. ಅವರ ಜೀವನ ಕತೆಯನ್ನು ಸಿನಿಮಾ ಮಾಡಲಾಗುತ್ತಿದ್ದು ಶಿವರಾಜ್ ಕುಮಾರ್ ಅವರು ಗುಮ್ಮಡಿ ನರಸಯ್ಯನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಈ ತೆಲುಗು ರಾಜಕೀಯ ನಾಯಕನ ಸಿನಿಮಾ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ. ಸಿನಿಮಾ ಅನ್ನು ಎನ್ ಸುರೇಶ್ ರೆಡ್ಡಿ ಎಂಬುವರು ನಿರ್ಮಾಣ ಮಾಡುತ್ತಿದ್ದು, ಪರಮೇಶ್ವರ್ ಹಿವರಾಲೆ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ.