ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚೇತರಿಸಿಕೊಂಡಿದ್ದು ಮತ್ತೆ ಸಿನಿಮಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸದ್ಯ ಶಿವರಾಜ್ ಕುಮಾರ್ ನಟನೆಯ ಡ್ಯಾಡ್ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನಡೆದಿದ್ದು, ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸುಮಾರು 32 ವರ್ಷಗಳ ಹಿಂದೆ ಶಿವರಾಜ್‌ಕುಮಾರ್ ಅಭಿನಯದ ‘ಜಗ ಮೆಚ್ಚಿದ ಹುಡುಗ’ ಚಿತ್ರ ಸಹ ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ಶಿವಣ್ಣ ಅಭಿನಯದ ಹೊಸ ಚಿತ್ರ ʼಡ್ಯಾಡ್ʼ ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ವಿಶೇಷ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಚಿತ್ರದಲ್ಲಿ ಶಿವಣ್ಣ ಡಾಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
27 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ‘ಗಡಿಬಿಡಿ ಕೃಷ್ಣ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವೈದ್ಯರಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಶಿವಣ್ಣ ಡಾಕ್ಟರ್ ಆಗಿ ಕಾಣಿಸಿಕೊಳ್ತಿದ್ದಾರೆ. 1998ರಲ್ಲಿ ‘ಗಡಿಬಿಡಿ ಕೃಷ್ಣ’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಒಂದು ಪಾತ್ರದಲ್ಲಿ ಕೃಷ್ಣನಾಗಿ ನಟಿಸಿದ್ದರೆ, ಇನ್ನೊಂದು ಪಾತ್ರದಲ್ಲಿ ಡಾ. ಶಿವರಾಮ್ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಡಾಕ್ಟರ್ ಆಗಿ ನಟಿಸೋಕೆ ಶಿವಣ್ಣ ರೆಡಿಯಾಗಿದ್ದಾರೆ.
ಈ ಹಿಂದೆ ‘ಭಗವಂತ್ ಕೇಸರಿ’, ‘ಉಗ್ರಂ’, ‘ಟಕ್ ಜಗದೀಶ್’ ಮುಂತಾದ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಪೆದ್ದಿ, ಈ ಚಿತ್ರವನ್ನು ಮೈರಾ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’ ಮತ್ತು ‘ಹಿಡಿಂಬ’ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ.
‘ಡ್ಯಾಡ್’ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.