ಬಸವ ಯೋಗ ಮಂದಿರದಲ್ಲಿ ಶಿವರಾತ್ರಿ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಹಾಶಿವರಾತ್ರಿ ಎಂದರೆ ಇಡೀ ದಿನ ಉಪವಾಸವಿದ್ದು, ಶಿವ ಇಲ್ಲವೆ ಶಿವಲಿಂಗ ದೇವಾಲಯಗಳಲ್ಲಿನ ಮೂರ್ತಿ ದರ್ಶನ ಪಡೆದು ಫಲಾಹಾರ ಸೇವಿಸಿ ರಾತ್ರಿ ಭಜನೆ, ಕೀರ್ತನೆ, ಸಂಗೀತ ಮೂಲಕ ಜಾಗರಣೆ ಮಾಡುವುದು ಎಂಬುದು ಬಹುಜನರ ತಿಳುವಳಿಕೆಯಾಗಿದೆ. ಇದು ಸಾಂಕೇತಿಕವಾಗಿ ನಿಜವೆನಿಸಿದರೂ ತಾತ್ವಿಕವಾಗಿ ಶಿವ ಬೆಳಕಿನ ಸಂಕೇತ. ರಾತ್ರಿ ಕತ್ತಲಿನ ಸಂಕೇತ ಅಂದರೆ ಅಜ್ಞಾನದಿಂದ ಜ್ಞಾನದ ಕಡೆ ನಡೆಯುವುದು ಶಿವರಾತ್ರಿಯಾಗಿದೆ. ನಿಜಾರ್ಥದಲ್ಲಿ ನಿತ್ಯ ಶಿವಸತ್ಯ ತತ್ವಾಚರಣೆಗಳನ್ನು ಆಚರಿಸುವುದು ಶಿವರಾತ್ರಿಯಾಗಿದೆ ಎಂದು ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಅಭಿಪ್ರಾಯಪಟ್ಟರು.

Advertisement

ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಇವರು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆಸಿದ 92ನೇ ಮಾಸಿಕ ವಚನ ಶ್ರವಣ ಮತ್ತು ಮಹಾಶಿವರಾತ್ರಿ ಆಚರಣೆ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಶಿವರಾತ್ರಿಯನ್ನು ಆರೋಗ್ಯಕ್ಕೆ ಪೂರಕವಾಗಿ ಆಚರಿಸಬೇಕು. ಕಠಿಣ ಉಪವಾಸ ವೃತಾಚರಣೆ ಸಾಮರ್ಥ್ಯವಿದ್ದವರು ಆಚರಿಸಬೇಕು. ದಿನನಿತ್ಯ ಆಹಾರ ಸೇವೆನೆಯಲ್ಲಿ ಕಾಲು ಭಾಗವಾದರೂ ಫಲ (ಹಣ್ಣು-ಹಂಪಲ) ಆಹಾರ ಸೇವಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಭಿಕರಿಗೆ ಸೂಚಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲದ ಶಿವರಾತ್ರಿ ಮಹಿಮೆ ತಿಳಿಸಿದರು. ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸೂರ, ಶಂಕರ ದೇವನ ಡಮರುಗ ನುಡಿಯಿತು ಎಂಬ ಹಾಡಿನೊಂದಿಗೆ ಭಜನೆ ಮಾಡಿಸಿದರು. ಸಭಾಂಗಣದಲ್ಲಿ ಉಪಸ್ಥಿತರಿದ್ದ ಜಯಶ್ರೀ ವಸ್ತ್ರದ ಶಿವ ಅಷ್ಟೋತ್ತರ ಶತನಾಮಾವಳಿ ಹೇಳಿಸಿದರು. ಸುನಂದಾ ಜ್ಯಾನೋಪಂತರ ವಚನ ಸಂಗೀತ ಸೇವೆ ಸಲ್ಲಿಸಿದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಳಗುಂದ ನಾಕಾ ಶಾಖೆಯ ಸಿಬ್ಬಂದಿ ರವಿ ಹುಡೇದ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವ ತತ್ವಾಭಿಮಾನಿಗಳಾದ ವೀಣಾ ಗೌಡರ ಮಾತನಾಡಿ, ಹೆಚ್ಚಿನಾಂಶ ಮಹಿಳೆಯರು ಎಲ್ಲ ಹಬ್ಬಗಳ ವಾರಸುದಾರರಾಗಿದ್ದಾರೆ. ಮಹಿಳೆಯರು ಮನೆಯಲ್ಲಿನ ಎಲ್ಲ ಸದಸ್ಯರು ಸೇರಿ ಹಬ್ಬಗಳನ್ನು ಆಚರಿಸುವಂತೆ ಪ್ರೇರೇಪಿಸಬೇಕು. ಹಿರಿ-ಕಿರಿಯರೆಲ್ಲರೂ ಸೇರಿ ಹಬ್ಬ ಆಚರಿಸಿದರೆ ಮಕ್ಕಳು ಉತ್ತಮ ಸಂಸ್ಕಾರವಂತರಾಗಿ ಸತ್ಪ್ರಜೆಗಳಾಗಿ ಬೆಳೆಯುವರು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here