ವಿಜಯಸಾಕ್ಷಿ ಸುದ್ದಿ, ಗದಗ : ಅಮ್ಮ ನಮ್ಮ ಅಂತರಾಳದ ಉಸಿರು, ಕಾಮಧೇನು. ಜೀವಕ್ಕೆ ಜನನಿಯಾಗಿ ನಮ್ಮ ಬದುಕಿಗೆ ಬುನಾದಿಯಾಗಿದ್ದಾಳೆ. ತಾಯಿ ಒಂಬತ್ತು ತಿಂಗಳು ಹೊತ್ತು ನೋವುಂಡು ಜನ್ಮ ಕೊಡುತ್ತಾಳೆ, ಮಗುವಿನ ನಗುವನ್ನು ನೋಡಿದ ಕ್ಷಣ ತನ್ನ ನೋವು ಮರೆತುಬಿಡುತ್ತಾಳೆ. ಹುಟ್ಟಿದ ಕೂಡಲೇ ಅಮೃತ ಉಣಿಸುತ್ತಾಳೆ. ಮಗು ತೊದಲು ನುಡಿಯುವಾಗ ಬಲು ಚೆಂದ. ಆ ತೊದಲು ನುಡಿ ಅರ್ಥವಾಗುವುದು ತಾಯಿಗೆ ಮಾತ್ರ. ತಾಯಿ-ಮಗುವಿನ ಸಂಬಂಧ ಅಳಿಸಲಾಗದ ಸಂಬಂಧ ಎಂದು ಸ್ತ್ರೀರೋಗ ತಜ್ಞೆ ಡಾ. ಶಾಂತಾಬಾಯಿ ಭೂಮರಡ್ಡಿ ಅಭಿಪ್ರಾಯಪಟ್ಟರು.
ಹಾಲಕೆರೆಮಠ ಆನಂದಾಶ್ರಮದ ಶಿವಾನುಭವ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೃಷಿಯಲ್ಲಿ ಸಾಧನೆಗೈದ ದೇವಕ್ಕ ಜಲರಡ್ಡಿ, ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅನೇಕ ಬೆಳೆಗಳನ್ನು ಬೆಳೆದು ಮಾದರಿಯಾದ ನಿಮಿತ್ತ, ಪಿಯುಸಿ ಪರೀಕ್ಷೆಯಲ್ಲಿ ಶೇ. 92 ಅಂಕಗಳನ್ನು ಪಡೆದು ತೇರ್ಗಡೆಯಾದ ಸೃಷ್ಟಿ ದಯಾನಂದ ಕೆಂಚರಡ್ಡಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರೇಮಾ ಮೇಟಿ ವಹಿಸಿದ್ದರು. ಸುಧಾ ಹುಚ್ಚಣ್ಣವರ, ಮಂಜುಳಾ ಚಿಂಚಲಿ, ರಾಜೇಶ್ವರಿ ಹುಚ್ಚಣ್ಣವರ ಸಾಧಕಿಯರನ್ನು ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಡವೇಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ವೇ.ಮೂ ಶ್ರೀ ಮಹೇಶ್ವರ ಸ್ವಾಮಿಗಳು ವಹಿಸಿದ್ದರು. ವೇದಿಕೆಯ ಮೇಲೆ ಕಾರ್ಯದರ್ಶಿಗಳಾದ ಭಾಗ್ಯಲಕ್ಷ್ಮಿ, ಕಸ್ತೂರಿ ಹಿರೇಗೌಡರ, ಉಪನ್ಯಾಸಕರಾದ ವೀಣಾ ತಿರ್ಲಾಪೂರ, ಸುಧಾ ಹುಚ್ಚಣ್ಣವರ ಉಪಸ್ಥಿತರಿದ್ದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೋಭಾ ಬ.ಮೇಟಿ ಮಾತನಾಡಿ, ಮಹಿಳೆ ಸ್ವಾಭಿಮಾನದಿಂದ, ಧೈರ್ಯದಿಂದ, ಸಂಯಮದಿಂದ ಇರಬೇಕು. ಸಾಮಾಜಿಕ ಕಳಕಳಿ ಇರಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಒಳ್ಳೆಯ ಪರಿಸರವನ್ನು ನೀಡಬೇಕು. ಯಶಸ್ವಿ ವ್ಯಕ್ತಿಗೆ ಮೌನ ಹಾಗೂ ನಗುವಿನ ಮಹತ್ವ ಚೆನ್ನಾಗಿ ತಿಳಿದಿರುತ್ತದೆ. ಜೀವನದಲ್ಲಿ ಏನೇ ಬರಲಿ, ಅದನ್ನು ಎದುರಿಸಬೇಕು. ಕಣ್ಣೀರು ಹಾಕುತ್ತಾ ಕುಳಿತುಕೊಳ್ಳಬೇಡಿ, ನಗುನಗುತ್ತಾ ಇರಿ ಎಂದು ಕಿವಿಮಾತು ಹೇಳಿದರು.