ಶಿವರಾತ್ರಿ ಜ್ಞಾನ ವೃದ್ಧಿಸುವ ಹಬ್ಬ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿವರಾತ್ರಿ ಹಬ್ಬವು ನಮ್ಮ ಮನದ ಕತ್ತಲೆಯನ್ನು ಹೊಡೆದೋಡಿಸಿ ಜ್ಞಾನವನ್ನು ವೃದ್ಧಿಸುವ ಹಬ್ಬವಾಗಿದೆ. ಇಂದಿನ ದಿನ ಉಪವಾಸ ಮತ್ತು ಜಾಗರಣೆ ಮೂಲಕ ಶಿವನನ್ನು ಒಲಿಸಿಕೊಳ್ಳುವ ಕಾರ್ಯವನ್ನು ಮಾಡುತ್ತೇವೆ. ಪರಶಿವ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.

Advertisement

ಪಟ್ಟಣದ ಬಸ್‌ನಿಲ್ದಾಣದ ಎದುರಿಗಿನ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸ್ಥಳೀಯ ಈಶ್ವರೀಯ ವಿಶ್ವವಿದ್ಯಾಲಯದವರು ಏರ್ಪಡಿಸಿದ್ದ ಶಿವರಾತ್ರಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಕಾರ್ಯಕ್ರಮದಲ್ಲಿ ನಮ್ಮ ಪ.ಪಂ ಪೌರ ಕಾರ್ಮಿಕರನ್ನು ಸನ್ಮಾನಿಸಿದ್ದು ಸಂತಸ ನೀಡಿದೆ. ಪೌರ ಕಾರ್ಮಿಕರು ಊರಿನ ಸ್ವಚ್ಛತೆಯ ಬಗ್ಗೆ ದಿನದ 24 ತಾಸೂ ಶ್ರಮಿಸುತ್ತಾರೆ. ಅವರನ್ನು ಗೌರವಿಸಿದ್ದು ಅಭಿಮಾನದ ಸಂಗತಿ ಎಂದರು.

ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ಶಿವರಾತ್ರಿಯನ್ನು ಜಗತ್ತಿನಾದ್ಯಂತ ಆಚರಿಸುತ್ತಾರೆ. ಈ ಸಮಯದಲ್ಲಿ ನಾವು ವಾತಾವರಣದಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ಚಳಿ ಕಡಿಮೆಯಾಗಿ, ಬಿಸಿಲು ಹೆಚ್ಚಾಗುವ ಸಂದರ್ಭವಿದು. ಈ ಸಮಯದಲ್ಲಿ ಶಿವನ ಭಜನೆ, ಸ್ಮರಣೆ ಮನಸ್ಸಿಗೆ ಆನಂದ ನೀಡುತ್ತದೆ ಎಂದರು.

ಶಿವನಗೌಡ ಪಾಟೀಲ ಮಾತನಾಡಿ, ನಮ್ಮ ದೇಹದ ರಚನೆಯೇ ಹಲವಾರು ರಾಸಾಯನಿಕಗಳಿಂದ ಕೂಡಿದೆ. ವಾತಾವರಣ ಬದಲಾದಂತೆ ಈ ದೇಹದಲ್ಲಿಯೂ ಬದಲಾವಣೆಗಳಾಗುತ್ತವೆ. ಶರೀರ ಎಲ್ಲದಕ್ಕೂ ಒಗ್ಗಿಕೊಳ್ಳುವ ಶಕ್ತಿಯನ್ನು ನೀಡು ಎಂದು ಶಿವರಾತ್ರಿಯಂದು ಶಿವನ ಪೂಜೆ ಮಾಡುತ್ತೇವೆ ಎಂದರು.

ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಚಾಲಕಿ ಬಿ.ಕೆ. ಸವಿತಕ್ಕ ಈಶ್ವರೀಯ ಸಂದೇಶ ನೀಡಿದರು. ಕೆಜಿಎಂಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿದರು. ವೇದಿಕೆಯ ಮೇಲೆ ಎಂಸಿಎಸ್ ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮರೆಡ್ಡಿ ಬಂಡಿವಡ್ಡರ, ಮುಖ್ಯ ಶಿಕ್ಷಕಿ ಲಲಿತಾ ಮ್ಯಾಗೇರಿ, ಮುಖ್ಯ ಶಿಕ್ಷಕ ಬಿ.ಬಿ. ಕುರಿ, ದೈಹಿಕ ನಿರ್ದೇಶಕ ಆರ್.ಎಸ್. ನರೇಗಲ್ಲ, ಎಂ.ಎಸ್. ಪೂಜಾರ, ಗಿರಿಜಾ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕಿ ಶ್ವೇತಾ ಕೊಟಗಿ ನಿರೂಪಿಸಿದರು. ಶಿಕ್ಷಕ ರವಿ ದೇವರೆಡ್ಡಿ ವಂದಿಸಿದರು. 45 ಅಡಿ ಎತ್ತರದ ಬಲೂನು ಶಿವಲಿಂಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಶಿವ ಎಂದರೆ ಮೋಕ್ಷ ನೀಡುವವನು ಎಂದರ್ಥ. ಧ್ಯಾನ ಮಾತ್ರದಿಂದ ಮತ್ತು ಅಭಿಷೇಕದಿಂದ ಅವನು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಶಿವರಾತ್ರಿಯ ದಿನ ಉಪವಾಸ ಮಾಡುವುದು ಎಂದರೆ ಶಿವನ ಬಳಿಯಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಎಂದರ್ಥ. ಶಿವನ ಪೂಜೆಯಿಂದ ನಮ್ಮ ಮನದ ಕತ್ತಲು ಹಿಂದಕ್ಕೆ ಸರಿದು ಜ್ಞಾನದ ಬೆಳಕು ನಮ್ಮಲ್ಲಿ ಪ್ರವೇಶಿಸುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here