ಕನ್ನಡದ ಸಿನಿಮಾ ಹಾಗೂ ಕಿರುತೆರೆ ನಟಿ ಶೋಭಿತಾ ಶಿವಣ್ಣ ಹೈದರಾಬಾದ್ ನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು ಆಕೆಯ ಹುಟ್ಟೂರಲ್ಲಿ ಅಂತ್ಯಸಂಸ್ಕಾರ ನೆರವೇರಿದೆಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶೋಭಿತಾ ಸಾವು ಆತ್ಮಹತ್ಯೆ ಎಂದೇ ವೈದ್ಯರು ಖಚಿತಪಡಿಸಿದ್ದಾರೆ.
ಶೋಭಿತಾ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಭಾನುವಾರ ಶೋಭಿತಾ ಶಿವಣ್ಣ ತನ್ನ ಮನೆಯಲ್ಲಿಯೇ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಸೀರಿಯಲ್ ಮೂಲಕ ಮನೆಮಾತಾಗಿದ್ದರು. ಒಂದೂವರೆ ವರ್ಷದ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುಧೀರ್ ರೆಡ್ಡಿಯನ್ನು ವಿವಾಹವಾದ ಬಳಿಕ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದರು. ಮ್ಯಾಟ್ರಿಮೋನಿಯಲ್ಲಿ ಶೋಭಿತಾ ಅವರ ಪ್ರೊಫೈಲ್ ನೋಡಿದ್ದ ಸುಧೀರ್ ರೆಡ್ಡಿ, ಕುಟುಂಬದವರನ್ನು ಒಪ್ಪಿಸಿ ಶೋಭಿತಾರನ್ನು ಮದುವೆಯಾಗಿದ್ದರು.
ಹೈದರಾಬಾದ್‌ನ ಶ್ರೀರಾಮನಗರದ ಕಾಲೋನಿಯಲ್ಲಿ ವಾಸವಾಗಿದ್ದ ಶೋಭಿತಾ ಮದುವೆಯಾದ ಬಳಿಕ ಸೀರಿಯಲ್ ಹಾಗೂ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಹೆಚ್ಚಾಗಿ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಇದು ಆಕೆಯ ಖಿನ್ನತೆಗೆ ಕಾರಣವಾಗಿದ್ದು, ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
ಶೋಭಿತಾ ಸಾವಿನ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ಆರಂಭಿದ್ದಾರೆ. ಶೋಭಿತಾ ಬರೆದಿದ್ದರು ಎನ್ನಲಾದ ಸೂಸೈಡ್ ನೋಟ್ ಕೂಡ ಲಭ್ಯವಾಗಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಇದರಲ್ಲಿ ಬರೆಯಲಾಗಿದೆ. ಅಲ್ಲದೇ, ‘ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ’ ಎಂದು ಸಹ ಬರೆಯಲಾಗಿದ್ದು, ಈ ಸಾಲುಗಳ ಅರ್ಥ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.