ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ನಾನ್‌ವೆಜ್ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ದಿನನಿತ್ಯದ ಆಹಾರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಳಿ ಮಾಂಸದ ಬೆಲೆ ಏಕಾಏಕಿ ಗಗನಕ್ಕೇರಿದ್ದು, ವಿಶೇಷವಾಗಿ ವಿದೌಟ್ ಸ್ಕಿನ್ ಚಿಕನ್ ಸೇವಿಸುವ ಗ್ರಾಹಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿಗೆ 260ರಿಂದ 280 ರೂಗಳ ನಡುವೆ ಲಭ್ಯವಿದ್ದ ಕೋಳಿ ಮಾಂಸ, ಇದೀಗ 340ರಿಂದ 350 ರೂಗಳ ಗಡಿ ದಾಟಿದೆ. ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು 370–380 ರೂವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚಿನ ಬೆಲೆ ನೀಡಬೇಕು ಎಂದು ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ.
ಇದೇ ವೇಳೆ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಕೊರತೆ ಉಂಟಾಗಿ, ಬೆಲೆ ಏರಿಕೆಗೆ ಕಾರಣವಾಗಿದೆ.



