ನೆಲಮಂಗಲ: ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದ ವೇಳೆ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಎಂಇಐ ಲೇಔಟ್ನಲ್ಲಿ ನಡೆದಿದೆ.
ವಿದ್ಯಾಜ್ಯೋತಿ (29) ಮೃತಳಾಗಿದ್ದು, ಕೆಲವು ದಿನಗಳ ಹಿಂದೆ ಜ್ಯೋತಿಷಿಯೋರ್ವರು ಆಕೆ ಅಲ್ಪಾಯುಷಿ ಎಂದು ಹೇಳಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ 9 ದಿನಗಳ ಪೂಜೆ ಮಾಡುವಂತೆ ಸೂಚನೆ ನೀಡಲಾಗಿತ್ತು. 9ನೇ ದಿನ ದೇವರಿಗೆ ತಾಳಿ ಅರ್ಪಿಸಬೇಕೆಂದು ತಿಳಿಸಿದ್ದರಿಂದ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು.
ಮಾರಮ್ಮ ದೇವರಿಗೆ ತಾಳಿ ಕೊಡಲು ಕಾರ್ಯಕ್ರಮ ರೂಪಿಸಲಾಗಿತ್ತು. ಮಧ್ಯಾಹ್ನ ಊಟದ ನಂತರ ವಿದ್ಯಾಜ್ಯೋತಿ ತನ್ನ ಕೊಠಡಿಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದುದರಿಂದ ಮನೆಯವರು ಕೆಲಸದಲ್ಲಿರಬಹುದೆಂದು ಭಾವಿಸಿದ್ದರು.
ಸಂಜೆ ವೇಳೆಗೆ ತಾಯಿ ಹಲವು ಬಾರಿ ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಯುವತಿ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.
ವಿದ್ಯಾಜ್ಯೋತಿಯ ಪೋಷಕರು ಅವಳ ಇಷ್ಟದಂತೆ ಕೊಡಗು ಮೂಲದ ಯುವಕನೊಂದಿಗೆ ಮದುವೆಗೆ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಮದುವೆಗೂ ಮುನ್ನ ಈ ದುರ್ಘಟನೆ ಸಂಭವಿಸಿದೆ.
ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ತನಿಖೆ ಮುಂದುವರೆದಿದೆ.



