ರಾಮನಗರ:- ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೂನೂರು ಗ್ರಾಮದ ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಎರಡು ಗಂಡಾನೆಗಳು ಮೃತಪಟ್ಟಿರುವ ಘಟನೆ ಜರುಗಿದೆ.
ಕಳೆದ ಒಂದು ವಾರದಿಂದ ಗ್ರಾಮದ ಸುತ್ತಮುತ್ತ ಏಳು ಗಂಡಾನೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡು ದಿನಗಳ ಕೆಳಗೆ ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದರು. ಈ ವೇಳೆ ಹದಿನೈದರಿಂದ ಇಪತ್ತು ವರ್ಷ ಪ್ರಾಯದ ಎರಡು ಗಂಡಾನೆಗಳು ನದಿ ದಾಟಲು ಹೋಗಿ ಜೊಂಡು ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
ಆಹಾರ ಅರಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಕಾಡಾನೆಗಳು ನಾಡಿಗೆ ಬಂದಿದ್ದವು. ಸದ್ಯ ಸಾವನ್ನಪ್ಪಿರುವ ಕಾಡಾನೆಗಳನ್ನು ಸಿಬ್ಬಂದಿ ನದಿಯಿಂದ ಮೇಲಕ್ಕೆತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನಡೆಸಲಿದ್ದಾರೆ. ಕುನೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.


