ಮುಂಬೈ:- ಮಹಾರಾಷ್ಟ್ರದ ಲೋನಾವಾಲಾದಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ಚಲಿಸುತ್ತಿದ್ದ ಕಾರಿನೊಳಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.
ಮಹಿಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ, ಅತ್ಯಾಚಾರವೆಸಗಿದ್ದಾರೆ. 25 ರಿಂದ 35 ವರ್ಷ ವಯಸ್ಸಿನ ಮೂವರು ಪುರುಷರು, ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದಾರೆ. ನಂತರ ಅವರು ನಿರ್ಜನ ಸ್ಥಳಗಳಿಗೆ ಹೋಗಿ ಸರದಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ದಾರಿಯುದ್ದಕ್ಕೂ ಕಾರನ್ನು ಹಲವು ಸ್ಥಳಗಳಲ್ಲಿ ನಿಲ್ಲಿಸಿದ್ದಾರೆ.
ಪದೇ ಪದೇ ಹಲ್ಲೆ ನಡೆಸಿದ ನಂತರ, ಆರೋಪಿಗಳು ಮಹಿಳೆಯನ್ನು ನಿರ್ಜನ ರಸ್ತೆಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಆಘಾತಕ್ಕೊಳಗಾದ ಸಂತ್ರಸ್ತೆ ಸುರಕ್ಷಿತ ಸ್ಥಳಕ್ಕೆ ತಲುಪಿ ಅಪರಾಧದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತ್ವರಿತವಾಗಿ ಕಾರ್ಯಪ್ರವೃತ್ತರಾದ ಲೋನಾವಾಲ ನಗರ ಪೊಲೀಸರು, 12 ಗಂಟೆಗಳಲ್ಲಿ ಓರ್ವನನ್ನು ಬಂಧಿಸಿದರು. ಅಲ್ಲದೇ ಇನ್ನುಳಿದ ಇಬ್ಬರು ಶಂಕಿತರಿಗಾಗಿ ಪೊಲೀಸ್ ತಂಡಗಳು ಸಕ್ರಿಯವಾಗಿ ಹುಡುಕಾಟ ನಡೆಸುತ್ತಿವೆ ಎಂದು ತಿಳಿದು ಬಂದಿದೆ.