ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಹಾಗೂ ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ದರ ಏರಿಕೆಯ ಹೊರೆ ಬೀಳಲಿದೆ. ವಿದ್ಯುತ್ ಸರಬರಾಜು ಕಂಪನಿಗಳ ನಷ್ಟವನ್ನು ಪೂರೈಸುವ ಉದ್ದೇಶದಿಂದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಪರಿಷ್ಕರಣೆಗೆ ಅನುಮತಿ ನೀಡಿದ್ದು, ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರಲಿದೆ.
ಈ ದರ ಏರಿಕೆಯು 2025-26ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಲಾಗಿದ್ದು, ಏಪ್ರಿಲ್ 2025ರಿಂದ ಮಾರ್ಚ್ 2026ರವರೆಗೆ ಬಳಸಿದ ವಿದ್ಯುತ್‌ಗೆ ಹೆಚ್ಚುವರಿ ಶುಲ್ಕವನ್ನು ಈಗ ವಸೂಲಿ ಮಾಡಲಾಗುತ್ತದೆ. ಈ ಬಾಕಿ ಮೊತ್ತವನ್ನು ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳು 2026-27ರ ಬಿಲ್ಲುಗಳಲ್ಲಿ ಸೇರಿಸಲಿವೆ.
ಕೈಗಾರಿಕೆಗಳು, ಹೋಟೆಲ್‌ಗಳು ಹಾಗೂ ಸಿನೆಮಾ ಮಂದಿರಗಳಂತಹ ವಾಣಿಜ್ಯ ಘಟಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗಿದೆ. ಇದರಿಂದ ಉತ್ಪಾದನಾ ವೆಚ್ಚ ಮತ್ತು ಸೇವಾ ಶುಲ್ಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇತ್ತೀಚಿನ ವರದಿಗಳ ಪ್ರಕಾರ ರಾಜ್ಯದಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಬಳಕೆ ಹೆಚ್ಚು ದಾಖಲಾಗಿದ್ದು, ಈ ತಿಂಗಳು ರಾಜ್ಯದ ಒಟ್ಟು ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ. ಬೆಂಗಳೂರು ನಗರವೊಂದೇ ಒಂದು ಸಣ್ಣ ರಾಜ್ಯದಷ್ಟು ವಿದ್ಯುತ್ ಬಳಸುತ್ತಿದೆ ಎನ್ನಲಾಗಿದೆ. ನಗರದ ಪೀಕ್ ಬೇಡಿಕೆ 2,000ರಿಂದ 2,500 ಮೆಗಾವ್ಯಾಟ್ ಮಟ್ಟ ತಲುಪಿದೆ.
ಮಾರ್ಚ್ ತಿಂಗಳಲ್ಲಿ ಬೇಸಿಗೆಯ ತಾಪಮಾನ ಏರಿಕೆಯಿಂದ ಎಸಿ ಬಳಕೆ ಹೆಚ್ಚಾದುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ಪಂಪ್‌ಸೆಟ್‌ಗಳ ನಿರಂತರ ಬಳಕೆ ವಿದ್ಯುತ್ ಬೇಡಿಕೆ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಜೊತೆಗೆ ಅಡುಗೆ ಅನಿಲದ ಕೊರತೆಯಿಂದ ಮನೆಗಳು ಹಾಗೂ ಹೋಟೆಲ್‌ಗಳು ಇಂಡಕ್ಷನ್ ಸ್ಟೌವ್, ಹೀಟರ್‌ಗಳಿಗೆ ಮೊರೆ ಹೋಗುವ ಸಾಧ್ಯತೆ ಇದ್ದು, ಇದರಿಂದ ಗ್ರಿಡ್ ಮೇಲೆ ಇನ್ನೂ 400ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಒತ್ತಡ ಬೀಳುವ ಆತಂಕ ವ್ಯಕ್ತವಾಗಿದೆ.



