ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯದ ಬಸ್ ಪ್ರಯಾಣ ದರಗಳನ್ನು ಶೇಕಡಾ 15 ರಷ್ಟು ಏರಿಸಲು ಅನುಮೋದನೆ ನೀಡುವ ಮೂಲಕ ರಾಜ್ಯದ ಜನರಿಗೆ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಹೌದು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶೇಕಡಾ 15 ರಷ್ಟು ದರ ಏರಿಕೆ ಅಂದ್ರೆ ನೀವು ಇದುವರೆಗೂ 100 ರೂಪಾಯಿಗೆ ಟಿಕೆಟ್ ಕೊಟ್ಟು ಪ್ರಯಾಣಿಸುತ್ತಿದ್ದರೆ ಇನ್ನು ಮುಂದೆ 115 ರೂಪಾಯಿ ಪಾವತಿಸಬೇಕು.
ಸರ್ಕಾರಿ ಬಸ್‌ನಲ್ಲಿ 200 ರೂಪಾಯಿ ಕೊಟ್ಟು ಪ್ರಯಾಣಿಸುವವರು 230 ರೂಪಾಯಿ ಕೊಡಬೇಕು. ಬೆಂಗಳೂರಿನಿಂದ ಹುಬ್ಬಳ್ಳಿ, ಮಂಗಳೂರಿನ ಕಡೆ ಪ್ರಯಾಣಿಸುವವರು ಸುಮಾರು 75 ರೂಪಾಯಿಗೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಸಚಿವ ಸಂಪುಟ ಸಭೆ ಬಳಿಕ ಸರ್ಕಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.