ಸ್ವಚ್ಚತೆಯ ನೆಪದಲ್ಲಿ ಗೂಡಂಗಡಿ ತೆರವು: ಕಣ್ಣೀರು ಸುರಿಸಿದ ಬಡ ವ್ಯಾಪಾರಸ್ಥರು

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಒಂದೊತ್ತಿನ ಊಟಕ್ಕಾಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ತಳ್ಳುಗಾಡಿ, ಗೂಡಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಹತ್ತಾರು ಬಡ ಕುಟುಂಬಗಳು ಬೀದಿಗೆ ಬಂದು ನಿಂತಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಮಂಗಳವಾರ ಪುರಸಭೆಯ ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ ಮತ್ತು ಪುರಸಭೆಯ ಸಿಬ್ಬಂದಿಗಳು ಏಕಾಏಕಿ ಬಸ್ ನಿಲ್ದಾಣದ ಬಳಿ ಜೆಸಿಬಿ ಯಂತ್ರವನ್ನು ತಂದು, ಸ್ವಚ್ಛತೆಯ ನೆಪವೊಡ್ಡಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿದ್ದ ಹತ್ತಾರು ಕುಟುಂಬಗಳನ್ನು ಬೀದಿಗೆ ತಳ್ಳಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಸಣ್ಣ ವ್ಯಾಪಾರಸ್ಥರು ಹಿಂಗ್ ಬಂದ್ ಅಂಗಡಿ ತೆಗಿ ಅಂದ್ರ ಹ್ಯಾಂಗ್ರೀ, ನಮಗ ವ್ಯಾಪಾರ ಬಿಟ್ರ ಮತ್ತೇನು ಇಲ್ಲ, ನಿತ್ಯ ದುಡಿದು ಜೀವನ ನಡೆಸ್ತಿವ್ರೀ ಎಂದು ತಮ್ಮ ಅಳಲು ತೋಡಿಕೊಂಡರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಪುರಸಭೆಯ ಸದಸ್ಯರು ಸ್ಥಳಕ್ಕೆ ಆಗಮಿಸಿ, ಮೊದಲು ವ್ಯಾಪಾರಸ್ಥರಿಗೆ ನೋಟಿಸ್ ನೀಡಿ ನಂತರ ತೆರವು ಕಾರ್ಯ ಮಾಡಬೇಕಿತ್ತು. ಅಲ್ಲದೆ ಅವರೆಲ್ಲರೂ ಶ್ರೀಮಂತರಲ್ಲ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತ ತಮ್ಮ ದೈನಂದಿನ ಬದುಕು ನಡೆಸುತ್ತಿದ್ದಾರೆ. ಹೀಗೆ ಏಕಾಏಕಿ ಬಂದು ಅಂಗಡಿ ತೆರವು ಮಾಡಿದರೆ ಹೇಗೆ ಎಂದು ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ ಮತ್ತು ಸಿಬ್ಬಂದಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷರು, ಇದಕ್ಕೆ ನಾನು ಕಾರಣವಲ್ಲ. ರಸ್ತೆ ಅಗಲೀಕರಣವಾಗಲಿದ್ದು, ಅಂಗಡಿಗಳನ್ನು ತೆರವುಗೊಳಿಸಿ ಎಂದು ಮುಖ್ಯಾಧಿಕಾರಿಗಳು ಸೂಚಿಸಿದ್ದಾರೆ ಎನ್ನುತ್ತಿದ್ದಂತೆ, ಸದಸ್ಯ ಬಾವಾಸಾಬ ಬೆಟಗೇರಿ, ಅವರು ಬಡವರು. ಮುಂಚಿತವಾಗಿ ಮಾಹಿತಿ ನೀಡದೇ ಮುಖ್ಯಾಧಿಕಾರಿಗಳು ಇಂತಹ ಕ್ರಮ ತೆಗೆದುಕೊಂಡಿದ್ದು ಸರಿಯಲ್ಲ. ಬಡವರ ಜೀವನದ ಜೊತೆಗೆ ಚೆಲ್ಲಾಟವಾಡುವುದು ಉಚಿತವಲ್ಲ. ಅವರಿಗೆ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಹಿಂದ ರಸ್ತೆ ಅಗಲೀಕರಣ ಮಾಡುತ್ತೇವೆಂದು ಅಂಗಡಿ ಕಿತ್ತರು. ಎರಡು ವರ್ಷವಾದರೂ ಏನೂ ಮಾಡಿಲ್ಲ. ಈಗ ಪುನಃ ಬಂದಿದ್ದಾರೆ. ನಮ್ಮದೇನೂ ದೊಡ್ಡ ಅಂಗಡಿ ಅಲ್ಲ. ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನದ ಬಂಡಿ ನಡೆಸಿದ್ದೇವೆ. ಹೀಗೆ ನಮ್ಮ ಹೊಟ್ಟೆಯ ಮೇಲೆ ಹೊಡೆಯುವುದು ಯಾವ ನ್ಯಾಯ ಎಂದು ವ್ಯಾಪಾರಸ್ಥರು ಕಣ್ಣೀರು ಹಾಕಿದರು.


Spread the love

LEAVE A REPLY

Please enter your comment!
Please enter your name here