ರಾಯಚೂರು: ಬಿಜೆಪಿಯವರಿಗೆ ನ್ಯಾಯ, ಅಭಿವೃದ್ಧಿ ಬೇಕಿಲ್ಲ. ಕೇವಲ ಕುತಂತ್ರ ರಾಜಕೀಯ ಮಾತ್ರ ಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ನ್ಯಾಯ, ಅಭಿವೃದ್ಧಿ ಬೇಕಿಲ್ಲ. ಕೇವಲ ಕುತಂತ್ರ ರಾಜಕೀಯ ಮಾತ್ರ ಬೇಕು. ನ್ಯಾಯ ಅನ್ಯಾಯದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ರಾಜೀನಾಮೆ ಮಾಡಬೇಕು ಎಂದು ಕೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಾಚ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿರುವ ವಿಚಾರದ ಕುರಿತು ಮಾತನಾಡಿ ವಿದೇಶದಲ್ಲಿದ್ದ ಸ್ನೇಹಿತರು ಬಂದು ವಾಚ್ ಕೊಟ್ಟಿದ್ದರು. ಅದರ ಬಗ್ಗೆ ಟೀಕೆ ಟಿಪ್ಪಣಿಗಳು ಬಂದ ಕೂಡಲೇ ತಕ್ಷಣ ಸರೆಂಡರ್ ಮಾಡಿದ್ದಾರೆ. ಜವಾಬ್ದಾರಿಯುತ ಜನಪ್ರತಿನಿಧಿ ಮಾಡಬೇಕಾದ ಕೆಲಸ ಮಾಡಿದ್ದಾರೆ.
ಅದು ತಪ್ಪಾ? ಕುಮಾರಸ್ವಾಮಿ ಅವರ ಕುಟುಂಬ ಮಾಡಿದ ಹಾಗೆ ಕಳ್ಳತನ ಮಾಡಬೇಕಿತ್ತಾ? ಅವರು ಯಾವ ರೀತಿ ಲೂಟಿ ಮಾಡಿ ಸಾವಿರಾರು ಕೋಟಿ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿಲ್ವಾ? ಇದನ್ನೆಲ್ಲಾ ಮಾಡಿರುವವರ ಮಾತುಗಳಿಗೆ ದೇಶ ಹಾಗೂ ರಾಜ್ಯದ ಜನರು ಹೆಚ್ಚು ಗಮನ ಕೊಡುವ ಅವಶ್ಯಕತೆಯಿಲ್ಲ ಎಂದ ಹೇಳಿದರು.