ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಪ್ರೀಕ್ವೆಲ್ ಸಿನಿಮಾದ ಟ್ರೈಲರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು ಸಖತ್ ಸದ್ದು ಮಾಡುತ್ತಿದೆ. ಕಾಂತಾರ ಮೂವಿ ನೋಡಬೇಕಾದ್ರೆ ಮದ್ಯಪಾನ, ಮಾಂಸಹಾರ ಸೇವನೆ ಮಾಡಬಾರದು ಅನ್ನೋ ಸುದ್ದಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಧೂಮಪಾನ, ಮದ್ಯಪಾನ ಹಾಗೂ ಮಾಂಸಹಾರ ಸೇವನೆ ಮಾಡಿ ಕಾಂತಾರ ಪ್ರೀಕ್ವೆಲ್ ಸಿನಿಮಾ ನೋಡಬಾರದು ಎನ್ನುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, ಊಟೋಪಾಚಾರಗಳು ಅವರವರ ಅಭ್ಯಾಸಗಳು, ಯಾವುದನ್ನೂ ಯಾರೂ ಪ್ರಶ್ನೆ ಮಾಡುವಂತ ಅಧಿಕಾರ ಇರಲ್ಲ. ಈ ಎಲ್ಲವೂ ಅವರವರ ಸ್ವಂತಕ್ಕೆ, ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಯಾರೋ ಫೇಕ್ ಫೋಸ್ಟ್ ಹಾಕಿದ್ದಾರೆ. ಈ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ಅವರ ಬಳಿ ಹೋಗಿ ಮಾತನಾಡುವುದು ಕಷ್ಟ. ಆ ಮೇಲೆ ಅವರೇ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಕ್ಷಮೆ ಕೂಡ ಕೇಳಿದರು ಎಂದು ಹೇಳಿದ್ದಾರೆ.
ಈ ಪೋಸ್ಟ್ಗೂ ನಮ್ಮ ಪ್ರೊಡಕ್ಷನ್ ಹೌಸ್ಗೂ ಯಾವುದೇ ಸಂಬಂಧ ಇಲ್ಲ. ಇದನ್ನು ನೋಡಿದಾಗ ನನಗೆ ಫುಲ್ ಶಾಕ್ ಆಯಿತು. ನನಗೆ ಯಾರೋ ಕಳುಹಿಸಿದಾಗ ಪ್ರೊಡಕ್ಷನ್ ಹೌಸ್ಗೆ ಯಾಕೆ ಇದು ಮಾಡುತ್ತಿದ್ದಾರೆ, ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಜನರು ಈ ಬಗ್ಗೆ ಏನು ಅಂದುಕೊಳ್ಳುತ್ತಾರೆ?. ಪ್ರತಿಯೊಬ್ಬರಿಗೆ ಅವರವರ ಬದುಕಿನ ಶೈಲಿ, ಹಕ್ಕು, ಅವರ ವಿವೇಚನೆಗೆ ಬಿಟ್ಟದ್ದು. ಇದನ್ನ ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ರಿಷಭ್ ಶೆಟ್ಟಿ ತಿಳಿಸಿದ್ದಾರೆ.



