ಭ್ರಷ್ಟಾಚಾರದ ಕಳಂಕ ಇಲ್ಲದ ಒಬ್ಬ BJP ನಾಯಕನನ್ನು ತೋರಿಸಿ: ಮೋದಿಗೆ ಸಿದ್ದರಾಮಯ್ಯ ಸವಾಲ್!

0
Spread the love

ಬೆಂಗಳೂರು:- ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ತೋರಿಸಿ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

Advertisement

ಮುಡಾ ಹಗರಣದಲ್ಲಿ ತನಿಖೆಗೆ ಆದೇಶ ದೊರೆತ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಗ್ಗೆ ರ‍್ಯಾಲಿಯೊಂದರಲ್ಲಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿಗೆ ಇದೀಗ ಮುಖ್ಯಮಂತ್ರಿಗಳು ಎಕ್ಸ್ ಸಂದೇಶದ ಮೂಲಕ ತಿರುಗೇಟು ನೀಡಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮ ಇಲ್ಲ.

ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ಧವೂ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರಿಯತೆಗೆ ಏನು ಕಾರಣ? ಈ ಭ್ರಷ್ಟಾಚಾರದಲ್ಲಿ ನೀವೂ ಭಾಗಿದಾರರೆಂದು ತಿಳಿದುಕೊಳ‍್ಳಬಹುದೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ.

ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ಘನತೆವೆತ್ತ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರೇ, ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರವಾಗಿ ನಿಮ್ಮ ಕಾರ್ಯಾಲಯದ ವಾಷಿಂಗ್ ಮಷಿನ್ ಕೆಲಸ ಮಾಡುತ್ತಿರುವುದನ್ನು ದೇಶ ಗಮನಿಸುತ್ತಿದೆ. ನಿಮ್ಮಿಂದಲೇ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ವಿರೋಧ ಪಕ್ಷಗಳ ನಾಯಕರನ್ನೆಲ್ಲಾ ವಾಷಿಂಗ್ ಮಷಿನ್​ನಲ್ಲಿ ಹಾಕಿ ಪರಮ ಪ್ರಾಮಾಣಿಕರನ್ನಾಗಿ ಮಾಡುತ್ತಿರುವ ನಿಮ್ಮ ಚಾಕಚಕ್ಯತೆಗೆ ಶಹಭಾಸ್ ಅನ್ನಲೇ ಬೇಕು. ಅಧಿಕೃತ ಮಾಹಿತಿಯ ಪ್ರಕಾರವೇ 2014ರಿಂದ ಇಲ್ಲಿಯ ವರೆಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ 25 ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಿದ್ದಾರೆ. ಇವರಲ್ಲಿ 23 ನಾಯಕರನ್ನು ಭ್ರಷ್ಟಾಚಾರದ ಆರೋಪಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಮುಕ್ತಗೊಳಿಸಿವೆ.

ಹಿಮಂತಾ ಶರ್ಮಾ, ಸುವೇಂದು ಅಧಿಕಾರಿ, ಹೆಚ್.ಡಿ.ಕುಮಾರಸ್ವಾಮಿ, ಅಜಿತ್ ಪವಾರ್, ಅಶೋಕ್ ಚವ್ಹಾಣ್, ನಾರಾಯಣ ರಾಣೆ, ಪ್ರತಾಪ್ ಸರ್‌ನಾಯಕ್ ಅವರಿಂದ ಹಿಡಿದು ಇತ್ತೀಚಿನ ಏಡ್ಸ್ ಟ್ರ್ಯಾಪ್ ಗಿರಾಕಿ ಮುನಿರತ್ನ ವರೆಗೆ ಎಷ್ಟೊಂದು ಭ್ರಷ್ಟರನ್ನು ವಾಷಿಂಗ್ ಮೆಷಿನ್ ನಲ್ಲಿ ತೊಳೆದು ನೀವು ಕ್ಲೀನ್ ಮಾಡಿಲ್ಲ? ಇವೆಲ್ಲ ಕೇವಲ ಧರ್ಮಾರ್ಥ ಸೇವೆಯೇ ಪ್ರಧಾನಿಗಳೇ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಅವರೇ, ನಿಮ್ಮ ಪಕ್ಷದ ಖಜಾನೆಗೆ ಸಂದಾಯವಾಗಿರುವ ಚುನಾವಣಾ ಬಾಂಡ್​​ಗಳ ಹಿಂದಿನ ಕೊಡುಗೈ ದಾನಿಗಳು ಯಾರು? ಅವರು ಕೊಟ್ಟದ್ದೆಷ್ಟು? ಅದಕ್ಕಾಗಿ ಅವರು ಪಡೆದದ್ದು ಎಷ್ಟು? ಎನ್ನುವುದು ಇಂದು ದೇಶದ ಜನರ ಕಣ್ಣಮುಂದಿದೆ. ನಿಮ್ಮ ಹನ್ನೊಂದು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಲೂಟಿಗೈದವರು ದೇಶ ಬಿಟ್ಟು ಓಡಿಹೋಗಲು ದಾರಿ ಮಾಡಿಕೊಟ್ಟವರು ಯಾರು? ಅದಾನಿ-ಅಂಬಾನಿ ಅವರ ಸಂಪತ್ತು ಎಷ್ಟು ಪಟ್ಟು ಹೆಚ್ಚಾಯಿತು? ಬಡವರ ಗಳಿಕೆ ಎಷ್ಟು ಪಟ್ಟು ಕಡಿಮೆಯಾಯಿತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here