ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಂಸ್ಥಾನ ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದ ಆವರಣದ ಮುಂಭಾಗದಲ್ಲಿ ಸುಮಾರು 12 ಎಕರೆ ವಿಸ್ತೀರ್ಣದ ಮೈದಾನದಲ್ಲಿ 900ರಿಂದ 1000 ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ವೈವಿಧ್ಯಮಯವಾದ ಅಂಗಡಿ-ಮುಂಗಟ್ಟುಗಳನ್ನು ತೆರೆಯುವ ಕಾರ್ಯಗಳು ಭರದಿಂದ ಸಾಗಿವೆ. ಈ ಎಲ್ಲ ಅಂಗಡಿ ಮುಂಗಟ್ಟುಗಳು ಶ್ರೀಮಠದ ಕಂಬಗಳಂತೆ ಕಾಣುವ 4 ವಿಶಿಷ್ಟ ಮಹಾದ್ವಾರಗಳನ್ನು ಶ್ರೀಗವಿಮಠದ ಸಂಸ್ಥಾಪಕ ಶಿವಯೋಗಿಗಳಾದ ರುದ್ರಮುನಿ ಮಹಾಸ್ವಾಮಿಗಳು, ಶಿವಶಾಂತವೀರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಲಿವೆ. ಜಾತ್ರಾ ಸಮಯದಲ್ಲಿ ಅವು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನಗಳನ್ನು ಸೆಳೆಯುವವು.
ಸ್ನಾನ ಮತ್ತು ಶೌಚಾಲಯಗಳ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಚೌಕಿ, ತುರ್ತು ಚಿಕಿತ್ಸಾ ಘಟಕ, ಮಕ್ಕಳಿಗೆ ಹಾಲುಣಿಸುವ ಕೇಂದ್ರ, ವೃದ್ಧ ಹಾಗೂ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ.