ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಇದೀಗ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ಅವರು ವಿಜಯ ಹಝಾರೆ ಟ್ರೋಫಿ ಮೂಲಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.
ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಗಾಯಗೊಂಡಿರುವ ಕಾರಣ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಮುಂಬೈ ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ಅವರಿಗೆ ವಹಿಸಲಾಗಿದೆ. ಇಂದು (ಜನವರಿ 6) ನಡೆಯಲಿರುವ ಹಿಮಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.
ಅಲ್ಲದೆ, ಜನವರಿ 8ರಂದು ಪಂಜಾಬ್ ವಿರುದ್ಧ ನಡೆಯುವ ಪಂದ್ಯದಲ್ಲೂ ಅವರು ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈ ಎರಡು ಪಂದ್ಯಗಳ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗಿದೆ. ಇದಾದ ಬಳಿಕವೇ ಅವರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದ್ದರೂ, ಗಾಯದ ಹಿನ್ನೆಲೆಯಲ್ಲಿ ದೇಶೀಯ ಪಂದ್ಯಗಳ ಮೂಲಕ ಫಿಟ್ನೆಸ್ ತೋರಿಸಲು ಸೂಚಿಸಲಾಗಿದೆ. ಜನವರಿ 8ರ ಬಳಿಕವೇ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವ ಕುರಿತು ಅಂತಿಮ ತೀರ್ಮಾನವಾಗಲಿದೆ.



