ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವಿದೆ : ರಂಭಾಪುರಿ ಶ್ರೀಗಳು

0
Shri J. Foundation stone laying ceremony of Renukacharya Gurukula Sabhabhavan
Spread the love

ವಿಜಯಸಾಕ್ಷಿ ಸುದ್ದಿ, ರಾಮದುರ್ಗ : ವೀರಶೈವ ಧರ್ಮ ಅತ್ಯಂತ ಪ್ರಾಚೀನವಾಗಿದ್ದು, ಉತ್ಕೃಷ್ಟ ಸಂಸ್ಕೃತಿ ಹೊಂದಿದೆ. ಇದರ ಉಳಿವು ಮತ್ತು ಬೆಳವಣಿಗೆಗಾಗಿ ಗೊಡಚಿ ವೀರಭದ್ರೇಶ್ವರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಪ್ರಾರಂಭಕ್ಕೆ ಉದ್ದೇಶಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ತಾಲೂಕಿನ ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಮತ್ತು ಸಭಾ ಭವನದ ಶಿಲಾನ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ತತ್ವ ಸಿದ್ಧಾಂತ ಜೀವಾತ್ಮ ಪರಮಾತ್ಮನೆಡೆಗೆ ಸಾಗಲು ಸಹಕಾರಿಯಾಗಿದೆ. ಬೆಳೆಯುತ್ತಿರುವ ಯುವ ಜನಾಂಗದಲ್ಲಿ ಅರಿವು ಆಚರಣೆ ಇಲ್ಲದ ಕಾರಣ ಜೀವನದಲ್ಲಿ ತೊಳಲಾಟವನ್ನು ಕಾಣುತ್ತೇವೆ. ಈ ಕೊರತೆಯನ್ನು ಪರಿಹಾರ ಮಾಡಲು ಗುರುಕುಲ ಮಾದರಿಯ ಶಿಕ್ಷಣ ಈ ಸಂಸ್ಕೃತಿಯ ಉಳಿವಿಗೆ ಮುಖ್ಯವಾಗಿದೆ. ಆದ್ದರಿಂದ ಪಾಟೀಲ ಬಂಧುಗಳು ಶ್ರೀ ರಂಭಾಪುರಿ ಪೀಠಕ್ಕೆ ದಾನ ಮಾಡಿದ ಒಂದು ಎಕರೆ ನಿವೇಶನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ, ಗುರುಕುಲ, ಹಾಗೂ ಸಭಾ ಭವನ ಕಟ್ಟಡಗಳನ್ನು ಭಕ್ತರ ಸಹಕಾರದಿಂದ ಹಂತ ಹಂತವಾಗಿ ಸಂಪೂರ್ಣವಾಗಿ ಪೂರ್ಣಗೊಳಿಸುವ ಸದಿಚ್ಛೆ ತಮಗಿದೆ ಎಂದರು.
ಸಸಿಗೆ ನೀರೆರೆದು ಸಮಾರಂಭ ಉದ್ಘಾಟಿಸಿದ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭಾರತೀಯ ತತ್ವಜ್ಞಾನ ಹಾಗೂ ಮಠಗಳ ಪರಂಪರೆ ಬಹಳ ಪ್ರಾಚೀನವಾದುದು. ಇವತ್ತಿನ ಆಧುನಿಕ ಕಾಲದಲ್ಲಿ ಸಂಸ್ಕೃತಿ-ಆಚರಣೆ ಮರೆತು ಭಿನ್ನ ದಾರಿಯಲ್ಲಿ ನಡೆದು ಮಾನಸಿಕ ಶಾಂತಿ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವೀರಶೈವ ಧರ್ಮ ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಗುರುಕುಲ ಮತ್ತು ಸಮುದಾಯ ಭವನ ನಿರ್ಮಿಸುತ್ತಿರುವುದು ಈ ಭಾಗದ ಭಕ್ತರ ಸೌಭಾಗ್ಯವಾಗಿದೆ ಎಂದರು.
 ಸಂಸದರ ನಿಧಿಯಿಂದ ಈ ಕಾರ್ಯಕ್ಕೆ ವಿಶೇಷ ಅನುದಾನ ಕೊಡುವುದಾಗಿ ಘೋಷಿಸಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಜಿಲ್ಲೆಯ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ಮಾಜಿ ವಿಧಾನ ಪರಿಷತ್ತಿನ ಸಚೇತಕ ಮಹಾಂತೇಶ ಕವಟಗಿಮಠ ಅವರು ಈ ಕಾರ್ಯಕ್ಕೆ 5 ಲಕ್ಷ ರೂ. ದಾನವಾಗಿ ಕೊಡುವ ಭರವಸೆಯಿತ್ತರು. ಎಲ್ಲ ಶ್ರೀಗಳ ಪರವಾಗಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ತಮ್ಮ ಮಠದಿಂದ ಕಟ್ಟಡಕ್ಕೆ 5 ಲಕ್ಷ ರೂ ಕೊಡುವುದಾಗಿ ತಿಳಿಸಿದರು.
ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ತೊರಗಲ್ಲ, ಮುಳ್ಳೂರು, ಬನ್ನೂರು, ವಿಮಲಖೇಡ, ಭಾಗೋಜಿಕೊಪ್ಪ, ಚಿಪ್ಪಲಕಟ್ಟಿ, ಸಂಗೊಳ್ಳಿ, ಕುಂದರಗಿ, ಸತ್ತಿಗೇರಿ, ಹೊಸಯರಗಟ್ಟಿ, ಕಬ್ಬೂರು, ಲೋಕಾಪುರ ಶ್ರೀಗಳು ಪಾಲ್ಗೊಂಡಿದ್ದರು. ಮಹಾಂತೇಶ ಶಾಸ್ತಿç, ಟಿ.ಪಿ. ಮನೋಳಿ, ಎಸ್.ಬಿ. ಹಿರೇಮಠ, ಎಂ.ಕೊಟ್ರೇಶಪ್ಪ ಮೊದಲ್ಗೊಂಡು ಹಲವಾರು ಗಣ್ಯರು ಇದ್ದರು.
ಬೀಳಗಿ ರಾಜೇಶ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಗೊಡಚಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಭದ್ರಕಾಳಿ ಮಂಗಲ ಮೂರ್ತಿಗೆ ಪೂಜೆ ಸಲ್ಲಿಸಿದರು.
ನೇತೃತ್ವ ವಹಿಸಿದ ಎಂ.ಚಂದರಗಿ ಮತ್ತು ಕಟಕೋಳ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಬಹು ದಿನಗಳ ಕನಸು ನನಸಾಗುವ ಸುದಿನ ಕೂಡಿ ಬಂದಿದೆ. ನಮ್ಮೆಲ್ಲರ ಸಂಕಲ್ಪ ಗಟ್ಟಿಗೊಂಡು ದಸರಾ ಸವಿ ನೆನಪಿಗಾಗಿ ಗುರುಕುಲ, ಮಂದಿರ, ಸಭಾಭವನ ನಿರ್ಮಾಣಕ್ಕೆ ಭೂಮಿ ಪೂಜೆ ಜರುಗಿದ್ದು ಈ ಭಾಗದ ಭಕ್ತರ ಸೌಭಾಗ್ಯವೆಂದರೆ ತಪ್ಪಾಗದು. ಆದಷ್ಟು ಬೇಗ ಕಾರ್ಯ ಪೂರ್ಣಗೊಳಿಸಲು ಎಲ್ಲರ ಸಹಕಾರ ಅವಶ್ಯಕವೆಂದರು.

Spread the love
Advertisement

LEAVE A REPLY

Please enter your comment!
Please enter your name here