ವಿಜಯಸಾಕ್ಷಿ ಸುದ್ದಿ, ಗದಗ : ಮಹಾನ್ ತಪಸ್ವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾ ಗ್ರಂಥವನ್ನು ರಚಿಸಿ ಲೋಕ ಕಲ್ಯಾಣಕ್ಕಾಗಿ ಅರ್ಪಿಸಿದವರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗದಗ-ಬೆಟಗೇರಿ ನಗರಸಭೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಕಾವ್ಯರೂಪದಲ್ಲಿ ರಚಿಸಿದ್ದಾರೆ. 2400 ಶ್ಲೋಕಗಳಿರುವ ಈ ಮಹಾ ಗ್ರಂಥವನ್ನು ರಚಿಸಿ ಜಗತ್ಪ್ರಸಿದ್ಧಿ ಹೊಂದಿದವರು ವಾಲ್ಮೀಕಿ ಮಹರ್ಷಿ. ಈ ಮಹಾನ್ ಗ್ರಂಥವನ್ನು ಎಲ್ಲರೂ ಓದಿ ಅರ್ಥೈಸಿಕೊಳ್ಳುವ ಕಾರ್ಯ ಆಗಬೇಕಿದೆ. ಮಹರ್ಷಿ ವಾಲ್ಮೀಕಿಯವರ ಅನೇಕ ದಂತ ಕಥೆಗಳ ಉದಾಹರಣೆಗಳು, ನೀತಿ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಬಡತನ ಸಾಧನೆಗೆ ಅಡ್ಡಿಯಾಗಲಾರದು. ಸಮಾಜದಲ್ಲಿ ಅನೇಕರು ಬಡತನದಲ್ಲಿ ಜನಿಸಿದರೂ ಮಹಾನ್ ಸಾಧಕರಾದ ಉದಾಹರಣೆಗಳಿವೆ. ಕೀಳರಿಮೆ ತೊರೆದು ಉನ್ನತ ಮಟ್ಟದಲ್ಲಿ ಆಲೋಚಿಸಿ ಸಾಧನೆ ಮಾಡಲು ಮುಂದಾಗಬೇಕು. ವಾಲ್ಮೀಕಿ ಸಮಾಜ ಬಾಂಧವರು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ತಮ್ಮದೇ ಕೊಡುಗೆಗಳನ್ನು ನೀಡುವಂತಾಗಲಿ ಎಂದು ಎಸ್.ವಿ. ಸಂಕನೂರ ಆಶಿಸಿದರು.
ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರ ಮಹರ್ಷಿ ವಾಲ್ಮೀಕಿ ಕುರಿತ ಸಂದೇಶವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ವಾಚಿಸಿದರು.
ನಿಪ್ಪಾಣಿಯ ವಿ.ಎಸ್.ಎಂ.ಜಿ.ಆಯ್. ಬಾಗೇವಾಡಿ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಎಸ್. ಮಾದಣ್ಣವರ ಶ್ರೀ ಮಹರ್ಷಿ ವಾಲ್ಮೀಕಿ ಆರ್ದಶಗಳ ಕುರಿತು ಉಪನ್ಯಾಸ ನೀಡುತ್ತಾ, ಪ್ರಸ್ತುತ ಕಾಲಘಟ್ಟಕ್ಕೆ ವಾಲ್ಮೀಕಿ ಅವರ ರಾಮಾಯಣ ಕಾವ್ಯ ಗ್ರಂಥ ಹೇಗೆ ಅಳವಡಿಸಿಕೊಳ್ಳಬೇಕು, ಸಮಾಜ ಬಾಂಧವರು ಯಾವ ರೀತಿ ಬದುಕು ರೂಪಿಸಿಕೊಳ್ಳಬೇಕು ಎಂಬುದರ ಕುರಿತು ಉದಾಹರಣೆಯೊಂದಿಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ವಿನಾಯಕ ಮಾನ್ವಿ, ನಾಗರಾಜ್ ತಳವಾರ, ನಾಮನಿರ್ದೇಶಿತ ಸದಸ್ಯ ದುರ್ಗೇಶ್ ವಿಭೂತಿ, ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳವಾಡಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ವೆಂಕಟೇಶ್ ಆಲ್ಕೋಡ್ ಹಾಗೂ ತಂಡದವರು ನಾಡಗೀತೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.
ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳಲ್ಲಿ ನ್ಯಾಯ, ನೀತಿ, ಧರ್ಮದಿಂದ ಬದುಕು ಸಾಗಿಸುವ ಮಾರ್ಗ ಅಡಗಿದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ರೂಪಿಸಿಕೊಳ್ಳುವ ಹಲವಾರು ವಿಷಯಗಳನ್ನ ವಿವರಿಸಲಾಗಿದೆ. ವಾಲ್ಮೀಕಿ ಸಮುದಾಯದ ಬಾಂಧವರು ಪ್ರೀತಿ-ವಿಶ್ವಾಸಕ್ಕೆ ಹೆಸರಾಗಿದ್ದಾರೆ. ಸಂದರ್ಭ ಬಂದರೆ ಜೀವಕ್ಕೆ ಜೀವ ನೀಡಲೂ ಸಿದ್ಧರಾಗುತ್ತಾರೆ ಎಂದು ಎಸ್.ವಿ.ಸಂಕನೂರ ಬಣ್ಣಿಸಿದರು.
ರಾಮ ರಾಜ್ಯದ ಆದರ್ಶಗಳನ್ನು ಸರ್ಕಾರ ಶಕ್ತಿ, ಗೃಹಲಕ್ಷ್ಮಿ ಯೋಜನೆಗಳ ಮೂಲಕ ಸಾಕಾರಗೊಳಿಸಿದೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಇಲಾಖೆ ಮೂಲಕ ಸ್ತ್ರೀ ಸಬಲೀಕರಣ, ಶಿಕ್ಷಣಕ್ಕಾಗಿ ವಸತಿ ನಿಲಯಗಳನ್ನು ಆರಂಭಿಸಿ ಒತ್ತು ನೀಡಿದೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರರ ಕಾಲದಿಂದಲೂ ಅಪಾರ ಕಾರ್ಯಗಳು ಆಗುತ್ತಾ ಬಂದಿವೆ. ವಾಲ್ಮೀಕಿ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು.
– ಡಾ. ಎನ್.ಎಸ್. ಮಾದಣ್ಣವರ.
ಪ್ರಾಚಾರ್ಯರು, ವಿ.ಎಸ್.ಎಂ.ಜಿ.ಆಯ್.
ಬಾಗೇವಾಡಿ ಕಾಲೇಜು.