ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆದಿ ಜಗದ್ಗುರು ಶ್ರೀ ರೇಣುಕರು ವೀರಶೈವ ಧರ್ಮದ ಸಂಸ್ಥಾಪಕರು. ಎಲ್ಲರನ್ನೂ ಪ್ರೀತಿಸಿ, ಗೌರವಿಸುವ ಗುಣ ಹೊಂದಿರುವ ಈ ಧರ್ಮದ ಸ್ಥಾಪನೆಯ ಮೂಲಕ ಅವರು ಧರ್ಮಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಆದ್ದರಿಂದ ಶ್ರೀ ರೇಣುಕರು ಎಂದಿಗೂ ಜಗದ್ವಂದ್ಯರು ಎಂದು ನಿವೃತ್ತ ಶಿಕ್ಷಕ ಎಂ.ಎ. ಹಿರೇವಡೆಯರ ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದ್ವಾಪರ ಯುಗದಲ್ಲಿ ಶ್ರೀ ರೇಣುಕರು ಆಂಧ್ರಪ್ರದೇಶದ ಕೊಲ್ಲಿಪಾಕಿ ಎಂಬಲ್ಲಿ ಅವತರಿಸಿದರು. ಅಲ್ಲಿಂದ ಅಗಸ್ತ್ಯ ಮುನಿಗೆ ರಹಸ್ಯ ಬೋಧನೆ ನೀಡಲು ಅವರು ಈಗಿನ ಚಿಕ್ಕಮಗಳೂರು ಜಿಲ್ಲೆಯ ಮಲಯಾಚಲ ಎಂಬಲ್ಲಿ ಬಂದು ನೆಲೆನಿಂತರು. ಶ್ರೀ ಬಾಳೆಹೊನ್ನೂರು ಪೀಠವನ್ನು ಸ್ಥಾಪಿಸಿ ಆ ಮೂಲಕ ಧರ್ಮ ಜಾಗೃತಿಗೆ ಮುಂದಾದರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಿ.ಎ. ಅರವಟಗಿಮಠ ಮಾತನಾಡಿ, ಶ್ರೀ ರೇಣುಕರು ತೋರಿದ ಲೀಲೆಗಳು ಅಪಾರ. ಅವುಗಳನ್ನು ಅರಿಯಬೇಕೆಂದರೆ ಚರಿತ್ರೆಯನ್ನು ಓದಬೇಕು. ಅವರ ಅವತಾರದಿಂದ ಈ ಭೂಮಿ ಪಾವನವಾಯಿತು ಎಂದರು.
ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿ, ಶ್ರೀ ರೇಣುಕರು ತಮ್ಮ ಉಗಮಕ್ಕೆ ಅಂಗವನ್ನಾಧರಿಸಲಿಲ್ಲ. ಅವರು ಲಿಂಗದಿಂದ ಉದ್ಭವಿಸಿದರು. ಆದ್ದರಿಂದ ಅವರನ್ನು ಲಿಂಗೋದ್ಭಕ ಜಗದ್ಗುರು ಎಂದು ಕರೆಯಲಾಗುತ್ತದೆ. ಅವರು ದೇವ ಸೃಷ್ಟಿಯ ಪರಮಾತ್ಮ ಸ್ವರೂಪರು. ದೇಹ ಸೃಷ್ಟಿಯ ಮಾನವರಲ್ಲ ಎಂದರು.
ಈ ಸಂದರ್ಭದಲ್ಲಿ ರುದ್ರಮುನಿ ಶಾಸ್ತಿçಗಳು, ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಶರಣಪ್ಪ ಜುಟ್ಲದ, ಶಿವಯೋಗಿ ಜಕ್ಕಲಿ, ಈಶ್ವರ ಬೆಟಗೇರಿ, ಪ್ರಶಾಂತ ಹಿರೇಮಠ, ಬಸನಗೌಡ ಹಿರೆಗೌಡ್ರ, ವಿರುಪಾಕ್ಷಗೌಡ ಹಿರೆಗೌಡ್ರ, ಶಶಿಧರ ಓದ್ಸುಮಠ, ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿ ಧನ್ನೂರ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಸೇರಿದಂತೆ ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯ ಸಿಬ್ಬಂದಿಯವರಿದ್ದರು.
ಡಾ. ಕೆ.ಬಿ. ಧನ್ನೂರ ಮಾತನಾಡಿ, ಶ್ರೀ ಜಗದ್ಗುರು ರೇವಣಸಿದ್ದರಾಗಿ ಅವತರಿಸಿದ ರೇಣುಕಾಚಾರ್ಯರು ವೀರಶೈವ ಧರ್ಮದ ಯುಗ ಪ್ರವರ್ತಕರಾಗಿ ಈ ನಾಡಿನ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸಿದರು. ಅಗಸ್ತ್ಯ ಮುನಿಗೆ ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತವನ್ನು ಬೋಧಿಸಿದರು. ಇದನ್ನೇ ನಾವಿಂದು ಸಿದ್ಧಾಂತ ಶಿಖಾಮಣಿಯೆಂದು ಅಧ್ಯಯನ ಮಾಡುತ್ತೇವೆ. ಈ ಗ್ರಂಥದಲ್ಲಿ ಜೀವನಕ್ಕೆ ಬೇಕಾದ ಅನೇಕ ಮೌಲ್ಯಗಳಿವೆ. ಇವುಗಳನ್ನು ಅರ್ಥೈಸಿಕೊಂಡು ಬದುಕಿದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದರು.