ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ನಡೆದ 2024-25ನೇ ಸಾಲಿನ ಸಭೆಯಲ್ಲಿ ರೂ.6 ಕೋಟಿ 66 ಲಕ್ಷ ವೆಚ್ಚದ ಉಳಿತಾಯದ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.
ಪಟ್ಟಣದ ಪುರಸಭೆ 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ರೂ. 1 ಕೋಟಿ 89 ಲಕ್ಷ, ನೀರಿನ ಕರ ರೂ. 84 ಲಕ್ಷ, ವ್ಯಾಪಾರ ಪರವಾನಿಗೆ ರೂ. 8 ಲಕ್ಷ, ಮಳಿಗೆಗಳ ಬಾಡಿಗೆಯಿಂದ ರೂ. 12 ಲಕ್ಷ 60 ಸಾವಿರ, ಕಟ್ಟಡ ಪರವಾನಿಗೆಯಿಂದ ರೂ.15 ಲಕ್ಷ 70 ಸಾವಿರ ಹಾಗೂ ಖಾತಾ ಬದಲಾವಣೆಯಿಂದ ರೂ. 26 ಲಕ್ಷ 25 ಸಾವಿರ ಸೇರಿ ಇತರೆ ಮೂಲಗಳಿಂದ ಅಂದಾಜು ರೂ. 26 ಲಕ್ಷ 25 ಸಾವಿರ ನಿರೀಕ್ಷೆಯೊಂದಿಗೆ ಪುರಸಭೆ ಪ್ರಭಾರಿ ಮುಖ್ಯಾಧಿಖಾರಿ ಬಸವರಾಜ ಬಳಗಾನೂರ ಅಂದಾಜು ರೂ. 6 ಕೋಟಿ 66 ಲಕ್ಷ ವೆಚ್ಚದ ಉಳಿತಾಯ ಬಜೆಟ್‌ನ್ನು ಮಂಡಿಸಿದರು.
2024-25ನೇ ಸಾಲಿನ ಆಯವ್ಯಯ ಸಭೆಯಲ್ಲಿ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತ ಚರ್ಚೆಯ ವೇಳೆ, ಪುರಸಭೆ ಅಧಿಕಾರಿಗಳು ಕೆಲ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಪುರಸಭೆಗೆ 2-3 ವರ್ಷಗಳಿಂದ ತೆರಿಗೆ ತುಂಬಿಲ್ಲ ಎಂದು ಸ್ಥಾಯಿ ಸಮಿತಿ ಚೇರಮನ್ ಕನಕಪ್ಪ ಅರಳಿಗಿಡದ ಪ್ರಸ್ತಾಪಿಸುತ್ತಿದಂತೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಕೆಲ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಪುರಸಭೆ ರಾಘವೇಂದ್ರ ಮಂತಾ, ಜನರಿಗೆ ತೊಂದರೆ ಆಗುತ್ತದೆ ಎಂದು ಬಂದ್ ಮಾಡಿಲ್ಲ ಎಂದರು. ಇದಕ್ಕೆ ಆಕ್ಷೇಪಿಸಿದ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಪಟ್ಟಣದಲ್ಲಿನ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಳಿಂದ ಜನತೆಗೆ ಉಚಿತವಾಗಿ ಅಥವಾ ರಿಯಾಯತಿ ದರದಲ್ಲಿ ನೀರನ್ನು ಪೂರೈಸುತ್ತಿಲ್ಲ. ನೀರು ಮಾರಟವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ತೆರಿಗೆ ತುಂಬದ ಘಟಕಗಳಿಗೆ ತೆರಿಗೆ ತುಂಬಲು ಕಾಲಾವಕಾಶದ ನೋಟಿಸ್ ನೀಡಿ, ನಿಗದಿತ ಸಮಯದಲ್ಲಿ ಪುರಸಭೆಗೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಭರಣ ಮಾಡದ ಘಟಕಗಳನ್ನು ಮುಲಾಜಿಲ್ಲದೆ ಬಂದ್ ಮಾಡಿ. ನಮ್ಮಲ್ಲಿ ಯಾರೊಬ್ಬ ಸದಸ್ಯರು ತೆರಿಗೆ ತುಂಬದ ಘಟಕಗಳನ್ನು ಬಂದ್ ಮಾಡದಂತೆ ಹೇಳಿದರೆ ಇನ್ನುಳಿದ ಸದಸ್ಯರ ಗಮನಕ್ಕೆ ತರುವಂತೆ ತಿಳಿಸಿದರು.
ಈ ವೇಳೆ ಪುರಸಭೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾದ ಬಸವರಾಜ ಹೂಗಾರ, ಉಮೇಶ ರಾಠೋಡ, ಮುತ್ತಣ್ಣ ಮ್ಯಾಗೇರಿ, ರಪೀಕ್ ತೋರಗಲ್ ಹಾಗೂ ಸುಮಂಗಲಾ ಇಟಗಿ ಅವರನ್ನು ಸ್ವಾಗತಿಸಲಾಯಿತು.
ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್, ಸದಸ್ಯರಾದ ರಾಜು ಸಾಂಗ್ಲೀಕರ, ಮುದಿಯಪ್ಪ ಮುಧೋಳ, ಯು.ಆರ್. ಚನ್ನಮ್ಮನವರ, ಯಮನೂರ್ ತಿರಕೋಜಿ, ವಿಜಯಾ ಮಳಗಿ, ದ್ರಾಕ್ಷಾಯಿಣಿ ಚೋಳಿನ ಇದ್ದರು.
ಪಟ್ಟಣದ ಪುರಸಭೆಯಲ್ಲಿನ ಸಿಬ್ಬಂದಿಗಳು ಪುರಸಭೆ ಸದಸ್ಯರ ಮಾತಿಗೆ ಕಿಮ್ಮತ್ತು ನೀಡುವದಿಲ್ಲ. ಅದೇ ಏಜೆಂಟರು ಬಂದರೆ ಅವರಿಗೆ ಇನ್ನಿಲ್ಲದ ಗೌರವ ನೀಡುತ್ತಾರೆ. ಪುರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟ್‌ರಿಗೆ ಹೆಚ್ಚು ಬೆಲೆ. ನಾವು ಹೇಳಿದ ಕೆಲಸಗಳು ವಾರ ಕಳೆದರೂ ಸಹ ಆಗುವದಿಲ್ಲ, ಏಜೆಂಟರ್ ಮಧ್ಯಾಹ್ನ ಹೇಳಿದರೆ ಸಂಜೆ ಆಗಿರುತ್ತದೆ. ಇದಕ್ಕೆ ಕಡಿವಾಣ ಹಾಕಲು ಕ್ರಮವನ್ನು ಕೈಗೊಳ್ಳಿ ಎಂದು ಪ್ರಭಾರಿ ಮುಖ್ಯಾಧಿಕಾರಿಗೆ ಒತ್ತಾಯಿಸಿದರು.