ಬೆಂಗಳೂರು:- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಫುಟ್‌ಪಾತ್ ಗಿರಾಕಿಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಫುಟ್‌ಪಾತ್ ಗಿರಾಕಿಗಳು, ಅದಕ್ಕೆ ರಾಹುಲ್ ಗಾಂಧಿ ಫುಟ್‌ಪಾತ್‌ನಲ್ಲಿ ನಿಲ್ಲಿಸಿ ಮಾತಾಡಿಸಿದ್ದಾರೆ. ದಲಿತ ಪರ ಸಂಘಟನೆ, ಮೊದಲ ಟಾರ್ಗೆಟ್ ದಲಿತ, ರೈತರು ಮತ್ತು ಕನ್ನಡ ಪರ ಹೋರಾಟದ ಜೊತೆಗೆ ವಿರೋಧ ಪಕ್ಷದ ಧ್ವನಿ ಹತ್ತಿಕ್ಕಲು ರಾಜ್ಯ ಸರ್ಕಾರ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿದೆ. ಇದು ಗೂಂಡಾ ಮತ್ತು ಹಿಟ್ಲರ್ ಸರ್ಕಾರ. ಹೋರಾಟಗಾರರು ಮತ್ತು ವಿರೋದ ಪಕ್ಷಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಸರ್ಕಾರದ ಮುಖ್ಯ ಉದ್ದೇಶ.
ಈ ಮೂಲಕ ಸಂವಿಧಾನದ ಕಲಂ 19ರಡಿ ನೀಡಿರುವ ವಾಕ್ ಸ್ವಾತಂತ್ರ್ಯಕ್ಕೆ ನೇರವಾಗಿ ಪೆಟ್ಟು ಕೊಡುತ್ತಿರುವ ರಾಜ್ಯ ಸರ್ಕಾರ ಹಿಟ್ಲರ್ ಸರ್ಕಾರದಂತೆ ವರ್ತನೆ ಮಾಡುತ್ತಿದೆ. ವಿರೋಧ ಪಕ್ಷದ ಕಾರ್ಯಕರ್ತರು ಒಂದು ಟ್ವೀಟ್ ಮಾಡಿದರೆ, ಯಾವುದಾದರೂ ಅಭಿಪ್ರಾಯ ಫಾರ್ವರ್ಡ್ ಮಾಡಿದರೂ ಜೈಲಿಗೆ ಹಾಕುತ್ತಿದ್ದಾರೆ. ಆದರೆ, ಅದೇ ತಮ್ಮ ಪಕ್ಷದ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ, ಗೂಂಡಾಗಿರಿ ಮಾಡಿದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ಎಂಬಾತ ಒಬ್ಬ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಬೀದರ್ ನಲ್ಲಿ ಎಂಎಲ್ಸಿ ಒಬ್ಬ ಬಿಜೆಪಿ ಶಾಸಕನ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೇ ಹಲ್ಲೆ ಮಾಡಿದ್ದಾನೆ. ಬಳ್ಳಾರಿಯಲ್ಲಿ ನಡೆದಿದ್ದು ಏನು? ಭರತ್ ರೆಡ್ಡಿ ಒಬ್ಬ ಶಾಸಕನಾಗಿ, ಐದು ನಿಮಿಷದಲ್ಲಿ ಜನಾರ್ದನ ರೆಡ್ಡಿ ಮನೆ ಸುಟ್ಟು ಹಾಕುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇದನ್ನೆಲ್ಲ ನೋಡಿದರೆ ಇದು ಗೂಂಡಾಗಿರಿ ಸರ್ಕಾರ ಎಂದು ಹೇಳಬಹುದು ಎಂದಿದ್ದಾರೆ.



