ನವದೆಹಲಿ: ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ.
ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಭಾಗ್ಯಗಳಿಗೆ ಬಳಸಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕಿದೆ. ವಾಲ್ಮೀಕಿ ನಿಗಮದಲ್ಲಿ 78 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಖುದ್ದು ಸಿಎಂ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಡಾದ 14 ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ. ವಕ್ಫ್ ಆಸ್ತಿಯನ್ನು ಕಾಂಗ್ರೆಸ್‌ನವರು ಲೂಟಿ ಹೊಡೆದಿದ್ದಾರೆ. ಈಗ ಅದನ್ನು ವಿಷಯಾಂತರ ಮಾಡಲು ಅನ್ವರ್ ಮಾಣಿಪ್ಪಾಡಿ ವಿಚಾರ ಎತ್ತುತ್ತಿದ್ದಾರೆ. ಹಣದ ವ್ಯವಹಾರ ವಿಚಾರ ಸಿಬಿಐಗೆ ವಹಿಸಲು ಮುಂದಾಗಿದ್ದಾರೆ. ಇದನ್ನು ಸಿಬಿಐಗೆ ನೀಡುವುದಾದರೆ ಅದೇ ರೀತಿ ವಾಲ್ಮೀಕಿ, ಮುಡಾ, ವಕ್ಫ್ ಹಗರಣಗಳನ್ನು ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದ್ದಾರೆ.