ದಾವಣಗೆರೆ: ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಸ್ಥಾನದಲ್ಲಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡು ಇಲ್ಲಿವರೆಗೂ ಬಂದಿದ್ದಾರೆ. ರಾತ್ರಿ ಮಾತು ಖಾತ್ರಿ ಇರೋದಿಲ್ಲ ಎನ್ನುವಂತೆ ಇವರ ಮಾತುಗಳಿವೆ. ಅವರು ರಾಜಕೀಯವಾಗಿ ಇರುವ ತನಕ ಡಿಕೆಶಿ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ವಕ್ಫ್ ಜಾಗದ ವಿವಾದದ ವಿಚಾರವಾಗಿ, ರೈತರ ಮಠ ಮಂದಿಗಳ ಆಸ್ತಿ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಬ್ರಿಟಿಷರು ಮಾಡಿದ್ದ ಕಾನೂನನ್ನು ನೆಹರು ಉಳಿಸಿಕೊಂಡು ಬಂದರು. ಅದನ್ನು ಹಾಗೇ ಇಂದಿರಾಗಾಂಧಿಯವರು ಮುಂದುವರೆಸಿದರು. ಬಳಿಕ ಮನಮೋಹನ್ ಸಿಂಗ್ ಅವರು ವಕ್ಫ್‌ಗೆ ಪರಮಾಧಿಕಾರ ನೀಡಿದ್ದರು.
ಇದರ ಪರಿಣಾಮ ಯಾರು ಕೂಡ ವಕ್ಫ್ ಆಸ್ತಿಯನ್ನು ಪ್ರಶ್ನೆ ಮಾಡುವಂತಿಲ್ಲ. ಏನಾದರೂ ಪ್ರಶ್ನೆ ಮಾಡಬೇಕಾದರೆ ಅದು ವಕ್ಫ್ ನ್ಯಾಯಾಧಿಕರಣಕ್ಕೆ ಹೋಗಬೇಕು. ಇದು ತೋಳ ಕುರಿಯನ್ನು ತಿಂದಿದ್ದು, ಇನ್ನೊಂದು ಕುರಿ ನ್ಯಾಯಕ್ಕಾಗಿ ಅದೇ ತೋಟದ ಮುಂದೆ ನಿಂತಂತೆ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.



