ಬೆಂಗಳೂರು: ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಮುಂದಾದ ವೇಳೆ, ಸಿಎಂ ಫೋಟೋ ಸ್ವೀಕರಿಸದೇ ತಳ್ಳಿದ ಘಟನೆ ಇದೀಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ನಡೆಗೆ ನಟ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೊವನ್ನು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗ್ಗೇಶ್, “ರಾಯರನ್ನ ಅಪಮಾನ ಮಾಡಿದವರು ಉದ್ಧಾರವಾದ ಇತಿಹಾಸವಿಲ್ಲ. ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲೆಂದು ಕೋಟ್ಯಂತರ ಭಕ್ತರು ಜಪ–ತಪ–ವೈರಾಗ್ಯದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ತಂದಿದ್ದನ್ನು ಹೀಗೆ ತಿರಸ್ಕರಿಸಿದ ಮೊದಲ ವ್ಯಕ್ತಿಯನ್ನು ನನ್ನ ಜೀವನದಲ್ಲಿ ನೋಡುತ್ತಿದ್ದೇನೆ. ರಾಯರಿದ್ದಾರೆ… ಎದ್ದು ಬರುತ್ತಾರೆ… ಕಾಯಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಏನಿದು ಘಟನೆ?
ಬೆಳಗಾವಿ ಪ್ರವಾಸಕ್ಕಾಗಿ HALಗೆ ತೆರಳುವ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದ ಗೇಟ್ ಬಳಿ ಸಾರ್ವಜನಿಕರಿಂದ ಮನವಿ ಪತ್ರಗಳನ್ನು ಸ್ವೀಕರಿಸುತ್ತಿದ್ದರು. ಈ ಸಂದರ್ಭ ಅಭಿಮಾನಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸಿಎಂಗೆ ನೀಡಲು ಮುಂದಾದಾಗ, ಸಿಎಂ ಫೋಟೋ ಸ್ವೀಕರಿಸದೇ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಅಭಿಮಾನಿಯ ಮೇಲೆ ಗರಂ ಆಗಿದ್ದಾರೆಯೆಂಬ ಮಾತುಗಳು ಕೇಳಿಬಂದಿವೆ.
ಈ ಹಿಂದೆ ಕುಂಕುಮ ಹಾಗೂ ಪೇಟವನ್ನು ತಿರಸ್ಕರಿಸಿದ್ದ ಪ್ರಕರಣಗಳು ಚರ್ಚೆಗೆ ಬಂದಿದ್ದರೆ, ಇದೀಗ ರಾಘವೇಂದ್ರ ಸ್ವಾಮಿಗಳ ಫೋಟೋ ತಿರಸ್ಕಾರವು ಹೊಸ ವಿವಾದಕ್ಕೆ ಕಾರಣವಾಗಿದೆ. ಘಟನೆಗೆ ವಿಪಕ್ಷ ನಾಯಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳು ಹೆಚ್ಚುತ್ತಿವೆ.



