ರೈತರ ಪರವಾಗಿ ಆಡಳಿತವನ್ನು ಎಚ್ಚರಿಸಿದ ತೋಂಟದ ಸಿದ್ಧರಾಮ ಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ ಹಲವಾರು ದಿನಗಳಿಂದ ನಾಡಿನ ರೈತರು ತಾವು ಬೆಳೆದ ಕಬ್ಬಿಗೆ ಯೋಗ್ಯ ಬೆಲೆಯನ್ನು ನೀಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಸಕ್ಕರೆ ಕಾರಖಾನೆಗಳ ಮಾಲಿಕರು ರೈತರು ಕೇಳಿದ ಬೆಲೆಯನ್ನು ನೀಡಲು ಸಾಧ್ಯವಾಗುವುದಿಲ್ಲವೆಂದು ನಿರಾಕರಿಸಿದ ಹಿನ್ನೆಲೆದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಸ್ಪರ ಸಹಯೋಗದೊಂದಿಗೆ ರೈತರ ಸಮಸ್ಯೆಯನ್ನು ನೀಗಿಸುವುದು ಕಷ್ಟದ ಮಾತೇನೂ ಅಲ್ಲ. ಈ ದಿಶೆಯಲ್ಲಿ ಇಚ್ಛಾಶಕ್ತಿಯೊಂದಿಗೆ ಸರಕಾರಗಳು ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

Advertisement

ಪ್ರಾಕೃತಿಕ ಆಪತ್ತುಗಳು ಅನ್ನದಾತರನ್ನು ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಅತಿವೃಷ್ಟಿ-ಅನಾವೃಷ್ಟಿಗಳಿಂದ ತೊಂದರೆಗೊಳಗಾದ ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಗೆ ಯೋಗ್ಯ ಬೆಲೆಯನ್ನು ಪಡೆಯದಿದ್ದರೆ ಅವರು ಬದುಕುವುದಾದರೂ ಹೇಗೆ? ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಕ್ಕಳ ದುಬಾರಿ ಶಿಕ್ಷಣ, ಹಾಗೆಯೇ ಮದುವೆ-ಮುಂಜಿವೆ, ಆರೋಗ್ಯ ಮುಂತಾದವುಗಳ ಖರ್ಚು-ವೆಚ್ಚಗಳನ್ನು ನೀಗಿಸುವುದು ರೈತರಿಗೆ ಸವಾಲಾಗಿ ಪರಿಣಮಿಸಿವೆ. ಇಂಥ ಸಂದರ್ಭದಲ್ಲಿ ಸರಕಾರಗಳು ಮೀನ-ಮೇಷ ಮಾಡದೇ ತಕ್ಷಣ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದುದು ಕರ್ತವ್ಯ.

ಆಳುವ ಸರಕಾರಗಳೇ ರೈತರ ಗೋಳನ್ನು ಕೇಳದಿದ್ದರೆ ರೈತರು ಯಾರ ಮೊರೆ ಹೋಗಬೇಕು, ರೈತರು ಸರಕಾರಗಳಿಗೆ ಯೋಗ್ಯ ಬೆಲೆ ನೀಡಬೇಕೆಂದು ಕೇಳುವುದು ನ್ಯಾಯೋಚಿತವಾಗಿದೆ. ಕರ್ನಾಟಕದ ಎಲ್ಲಾ ಲಿಂಗಾಯತ ಮಠಾಧಿಪತಿಗಳು ರೈತ ಹೋರಾಟದ ಸಂದರ್ಭಗಳಲ್ಲಿ ಸದಾ ಅನ್ನದಾತರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈಗಲೂ ಅನ್ನದಾತರ ಬೆನ್ನಿಗೆ ನಿಂತಿದ್ದಾರೆ. ಸರಕಾರಗಳು, ಜನಪ್ರತಿನಿಧಿಗಳು ಪರಸ್ಪರ ದೋಷಾರೋಪಣೆ ನಿಲ್ಲಿಸಿ ತುರ್ತಾಗಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಅನ್ಯಥಾ ಸಂಭವನೀಯ ಅನಾಹುತಕ್ಕೆ ಸರಕಾರಗಳೇ ಹೊಣೆಯಾಗಬೇಕಾಗುವುದು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪರವಾಗಿ ಶ್ರೀಗಳು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here